ವೆಂಕಟೇಶ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಚಿತ್ತಾಪುರ; ಪಟ್ಟಣದ ವೆಂಕಟೇಶ ನಗರದಲ್ಲಿ ಸುಮಾರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ನಿವಾಸಿ ದೇವಪ್ಪ ನಂದೂರಕ‌ರ್ ಮಾತನಾಡಿ, ನೀರಿನ ಸಮಸ್ಯೆ ಕುರಿತು ಪುರಸಭೆ ವ್ಯವಸ್ಥಾಪಕರಿಗೂ, ನೀರು ಬಿಡುವರಿಗೂ ಹೇಳಿ ಹೇಳಿ ಸಾಕಾಗಿದೆ. ಅಲ್ಲದೆ ತಮ್ಮ ಕಚೇರಿಗೆ ಎರಡು ಮೂರು ಬಾರಿ ಲಿಖಿತ ಮನವಿ ಪತ್ರಗಳು ಕೊಟ್ಟಿದ್ದೇವೆ. ಜೊತೆಗೆ ವಾರ್ಡ್ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಅವರಿಗೂ ಕೂಡ ನೀರಿನ ಸಮಸ್ಯೆ ಬಗ್ಗೆ ಅನೇಕ ಸಲ ಗಮನಕ್ಕೆ ತರಲಾಗಿದೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಿಳುವಳಿಕೆಯುಳ್ಳ ನಾವುಗಳು ಇಂದಲ್ಲ ನಾಳೆ ಸರಿ ಮಾಡಬಹುದು ಸಮಯ ಕೊಟ್ಟು ನೋಡೋಣ ಎಂದು ಭಾವಿಸಿಕೊಂಡು ಇಲ್ಲಿಯವರೆಗೆ ತಾಳ್ಮೆ ತೆಗೆದುಕೊಂಡು ಬಂದಿದ್ದೇವೆ. ಎರಡು ದಿನಕ್ಕೊಮ್ಮೆ ನಮ್ಮ ಮನೆಗಳಿಗೆ ಟ್ಯಾಂಕ‌ರ್ ಮೂಲಕ ನೀರು ತರಿಸಿಕೊಂಡು ನಮ್ಮ ಜೀವನ ನಡೆಸುವಂತಾಗಿದೆ. ಇದು ನೀರು ಸರಬರಾಜು ಮಾಡುವವರಿಗೂ ತಿಳಿದ ವಿಷಯವಾಗಿದೆ ಮತ್ತು ಕಣ್ಣಾರೆ ನೋಡಿದ್ದಾರೆ. ಈಗ ನಾವು ನೀರಿನಿಂದ ಕಂಗಲಾಗಿ ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಇಲ್ಲಿಯವರೆಗೆ ನಮಗೆಲ್ಲ ಮಂತ್ರದಿಂದ ಮಾವಿನ ಕಾಯಿ ಉದುರಿಸುವ ಕೆಲಸವನ್ನೇ ಮಾಡಿದ್ದಾರೆ ಹೊರತು ಸಮರ್ಪಕವಾಗಿ ನಳದ ನೀರು ನಮ್ಮ ಮನೆಗಳಿಗೆ ಬರುವ ಹಾಗೆ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದರು.
ಈಗ ಪುನ: ಮನವಿ ಪತ್ರ ಸಲ್ಲಿಸುತ್ತಿದ್ದೇವೆ. ಒಂದು ವೇಳೆ ನೀರಿನ ಸಮಸ್ಯೆ ಪರಿಹಾರವಾಗದಿದ್ದರೆ ನಾವೆಲ್ಲರೂ ನಮ್ಮ ಕುಟುಂಬದ ಸಮೇತ ತಮ್ಮ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕು ಎಂದು ಕೂಡ ನಿರ್ಧಾರ ಮಾಡಿದ್ದೇವೆ ಎಂದರು.
ನೀರಿನ ತೊಂದರೆಯನ್ನು ತಕ್ಷಣ ನೀವಾರಿಸಬೇಕು. ಮತ್ತು ನಮ್ಮ ಕುಟುಂಬವನ್ನು ಬೀದಿಗೆ ಬರುವ ಹಾಗೆ ಮಾಡಬೇಡಿ ನೀರಿನಿಂದ ಪರದಾಡುತ್ತಿರುವ ನಮ್ಮ ಮನೆಗಳಿಗೆ ಸಮರ್ಪಕವಾಗಿ ನಳದ ನೀರು ಬರುವ ಹಾಗೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಮೋನಯ್ಯ ಪಂಚಾಳ, ಹಮೀದ್ (ರಿಗಲ್ ಟೇಲರ್), ಸಾಬಣ್ಣ ಕಲಬುರಗಿ, ಹಣಮಂತ ಆಚಾರಿ, ಉದಯಕುಮಾರ ಇಂಗಳೆ, ರಾಘವೇಂದ್ರ ದ್ಯಾವರಳ್ಳಿ, ರೂಪಾ ಪೂಜಾರಿ, ಬೇಬಿ ಗುತ್ತೇದಾರ, ಪ್ರಭಾವತಿ ಸೇರಿದಂತೆ ಇತರರು ಇದ್ದರು.

ವರದಿ ಮೊಹಮ್ಮದ್ ಅಲಿ ಚಿತ್ತಾಪುರ

error: Content is protected !!