ರೈತರು ಶ್ರಮ ಪಟ್ಟರೆ ವಿಶ್ವಕ್ಕೆ ಅನ್ನ : ಇಂದ್ರಜೀತ್ ಯಾದವ್

ರಾಯಚೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಇಂದು ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರ ನೇತೃತ್ವದಲ್ಲಿ “ರೈತರಿಗೆ ಶರಣರಿಂದ ಹಿತನುಡಿ, ಕೃಷಿ ತಂತ್ರಜ್ಞರಿಂದ ಸಲಹೆ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣೆ” ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವು ರಾಯಚೂರಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆರಂಭವಾಯಿತು. ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಅವರು ಎತ್ತಿನ ಬಂಡಿ ಚಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ರಾಜ್ಯ ಅಧ್ಯಕ್ಷರಾದ ಶಾಂತಗೌಡ ಚನ್ನಪಟ್ಟಣ, ಉಪಾಧ್ಯಕ್ಷರಾದ ಲಕ್ಷ್ಮಿಕಾಂತ ಎ. ಪಾಟೀಲ್, ಇಂದ್ರಜೀತ್ ಯಾದವ್ ಹಾಗೂ ಮುಜಾಹಿದ್ ಮರ್ಚೆಡ್ ಅವರು ಮಾಲಾರ್ಪಣೆ ಮಾಡಿ ಸಂವಿಧಾನ ಶಿಲ್ಪಿ ಹಾಗೂ ಅನ್ನದಾತ ರೈತರಿಗೆ ಜೈಕಾರ ಹಾಕಿದರು. ಬಳಿಕ ಮೆರವಣಿಗೆಯ ಮೂಲಕ ರಂಗಮಂದಿರಕ್ಕೆ ತೆರಳಿದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ಆರ್. ನಾಯಕ್ ಹಾಗೂ ರೂಪ ಶ್ರೀನಿವಾಸ ನಾಯಕ ಜ್ಯೋತಿ ಬೆಳಗಿಸಿದರು. ನಂತರ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಮಹಾದೇವ ಯಾದವ್ ಅವರು ನೇಗಿಲ ಪೂಜೆ ನೆರವೇರಿಸಿದರು. ಆನಂದ ಕುಮಾರ್ ಮಡಿವಾಳರ್ ಹಾಗೂ ಸುರೇಶ್ ಪೂಜಾರಿ ಅವರು ಚೌದರಿ ಚರಣಸಿಂಗ್ ಹಾಗೂ ನಂಜುಂಡಸ್ವಾಮಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಂದ್ರಜೀತ್ ಯಾದವ್ ಅವರು, “ರೈತರು ಶ್ರಮಪಟ್ಟು ಬೆಳೆದರೆ ಮಾತ್ರ ವಿಶ್ವಕ್ಕೆ ಅನ್ನ ಸಿಗುತ್ತದೆ. ಇಲ್ಲದಿದ್ದರೆ ಮಣ್ಣು ತಿನ್ನಬೇಕಾಗುತ್ತಿತ್ತು. ಆದ್ದರಿಂದ ರೈತ ದಿನಾಚರಣೆಯ ಮಹತ್ವ ಅತ್ಯಂತ ದೊಡ್ಡದು. ರೈತನ ಶ್ರಮಕ್ಕೆ ಬೆಂಬಲ ಸಿಕ್ಕಾಗ ಮಾತ್ರ ರೈತ ಖುಷಿಯಾಗಿರಲು ಸಾಧ್ಯ” ಎಂದು ಹೇಳಿದರು.

ಮುಂದೆ ಮಾತನಾಡಿದ ಮುಜಾಹಿದ್ ಮರ್ಚೆಡ್ ಅವರು, ನಮ್ಮ ಸಂಘಟನೆಯಿಂದ ಕಳೆದ ಫೆಬ್ರವರಿ 9ರಂದು “ರೈತರ ನಡೆ ಆಲಮಟ್ಟಿ ಕಡೆ” ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆ (ಯು.ಕೆ.ಪಿ. ಹಂತ–3) ಅನುಷ್ಠಾನಗೊಳ್ಳಲು ಆಲಮಟ್ಟಿ ಜಲಾಶಯವನ್ನು ಸುಮಾರು 17 ಅಡಿ ಎತ್ತರಿಸಬೇಕು. ಆಗ ಮಾತ್ರ ಯು.ಕೆ.ಪಿ–3 ಯೋಜನೆ ಜಾರಿಗೊಂಡು ರೈತರಿಗೆ ನೀರು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಮ್ಮ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ಇತ್ತೀಚಿನ ಬಜೆಟ್‌ನಲ್ಲಿ ಆಲಮಟ್ಟಿ ಡ್ಯಾಂ ಎತ್ತರಿಕರಣದಿಂದ ಮುಳುಗಡೆಯಾಗುವ ಭೂಮಿಗೆ ಪ್ರತಿ ಎಕರೆಗೆ 30 ರಿಂದ 40 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಜೊತೆಗೆ ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ಸಭೆಯ ಸಾರಥ್ಯವಹಿಸಿದ ದೇವರಾಜ ಯಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ಹಾಗೂ ರೈತರಿಗೆ ಸನ್ಮಾನ ಮಾಡಿ ಕಾರ್ಯಕ್ರಮದ ಯಶಸ್ಸನ್ನು ಪ್ರಶಂಸಿಸಿದರು.

error: Content is protected !!