ಬಿಸಿಲಿನ ತಾಪಕ್ಕೆ ವ್ಯಾಪಾರಿ ಸಾವು: ಮೂಲಸೌಕರ್ಯ ಕೊರತೆಗೆ ಆಕ್ರೋಶ

ಕಾಗವಾಡ: ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ತೀವ್ರ ಬಿಸಿಲಿನ ತಾಪಮಾನ ತಾಳಲಾರದೆ ತರಕಾರಿ ವ್ಯಾಪಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮೃತರನ್ನು ಪಕ್ಕದ ಉಗಾರ ಬುದ್ರುಕ ಗ್ರಾಮದ ವರ್ಧಮಾನ ಮಗದುಮ್ ಎಂದು ಗುರುತಿಸಲಾಗಿದೆ. ಅವರು ಉಗಾರ ಖುರ್ದ ತರಕಾರಿ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ತರಕಾರಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪುರಸಭೆ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಸ್ಥರಿಂದ ನಿಯಮಿತವಾಗಿ ಸಂತೆ ಕರ ವಸೂಲಿ ಮಾಡಲಾಗುತ್ತಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆ ವರ್ಷಗಳಿಂದ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.
ಸಂತೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇರುವುದಲ್ಲದೆ, ಮಹಿಳೆಯರಿಗಾಗಿ ಸಮರ್ಪಕ ಶೌಚಾಲಯ ಸೌಲಭ್ಯವೂ ಕಲ್ಪಿಸಲಾಗಿಲ್ಲ. ಬೇಸಿಗೆ ಸಮಯದಲ್ಲಿ ನೆರಳಿನ ವ್ಯವಸ್ಥೆ ಇಲ್ಲದೇ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬಿಸಿಲಿನ ತಾಪಕ್ಕೆ ಹೈರಾಣಾಗುತ್ತಿದ್ದಾರೆ ಎಂದು ದೂರಿದ್ದಾರೆ.
ತಕ್ಷಣವೇ ಪುರಸಭೆ ವತಿಯಿಂದ ನೆರಳು ಇರುವ ಪ್ರದೇಶದಲ್ಲಿ ಸಂತೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ವರದಿ ಭರತೇಶ ನಿಡೋಣಿ

error: Content is protected !!