ಕರ್ನಾಟಕ ರಾಜ್ಯ ಪೊಲೀಸ್ ಡೇಟಾ ಸೆಂಟರ್‌ಗೆ ISO/IEC 27001 ಪ್ರಮಾಣಪತ್ರ ಲಭಿಸಿದೆ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇಲಾಖೆಯಲ್ಲಿ ಬಳಕೆಯಲ್ಲಿರುವ ವಿವಿಧ ತಂತ್ರಾಂಶಗಳ ಅನುಷ್ಠಾನ ಹಾಗೂ ಇಲಾಖೆಯ ದತ್ತಾಂಶವನ್ನು ಸುರಕ್ಷಿತವಾಗಿ ಸಂಗ್ರಹಿಸುವುದು, ಸಂಸ್ಕರಿಸುವುದು ಮತ್ತು ನಿರ್ವಹಿಸುವ ಉದ್ದೇಶದಿಂದ ವಿಶೇಷ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿರುವ ದೇಶದ ಮೊದಲ ರಾಜ್ಯ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ.
ಈ ದತ್ತಾಂಶ ಕೇಂದ್ರವನ್ನು ಇಲಾಖೆಯ ಅತ್ಯುನ್ನತ ತಾಂತ್ರಿಕ ನೈಪುಣ್ಯ ಹೊಂದಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ವೃತ್ತಿಪರ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಇದರ ನಿರಂತರ ಮತ್ತು ನಿರ್ವಿಘ್ನ ಕಾರ್ಯಾಚರಣೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬಲಿಷ್ಠ ಆಂತರಿಕ ತಾಂತ್ರಿಕ ಸಾಮರ್ಥ್ಯ ಮತ್ತು ವೃತ್ತಿಪರತೆಯನ್ನು ಪ್ರತಿಬಿಂಬಿಸುತ್ತದೆ.

ಈ ವೃತ್ತಿಪರ ಶ್ರೇಷ್ಠತೆಯ ಮಾನ್ಯತೆಯಾಗಿ, ಕರ್ನಾಟಕ ರಾಜ್ಯ ಪೊಲೀಸ್ ಡೇಟಾ ಸೆಂಟರ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ (Information Security Management System ISMS) ISO/IEC 27001 ಪ್ರಮಾಣಪತ್ರ ಲಭಿಸಿದೆ. ಈ ಪ್ರಮಾಣಪತ್ರವು ಇಲಾಖೆಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ, ಸೈಬರ್ ಭದ್ರತಾ ಕ್ರಮಗಳು, ದತ್ತಾಂಶ ಸಂರಕ್ಷಣೆ ವ್ಯವಸ್ಥೆಗಳು ಹಾಗೂ ಮಾಹಿತಿ ನಿರ್ವಹಣಾ ಪ್ರಕ್ರಿಯೆಗಳು ಜಾಗತಿಕ ಮಟ್ಟದ ಮಾಹಿತಿ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ದೃಢೀಕರಿಸುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಡೇಟಾ ಸೆಂಟರ್‌ನಲ್ಲಿ ಅಪರಾಧ ದಾಖಲೆಗಳು, ಪೊಲೀಸ್ ಐಟಿ ವ್ಯವಸ್ಥೆಗಳು, ಸಿಸಿಟಿಎನ್ಎಸ್ (CCTNS), ಐಸಿಜೆಎಸ್ (ICJS), ಎಎಫ್‌ಐಎಸ್ (AFIS), ಸೈಬರ್ ಅಪರಾಧ ಮಾಹಿತಿ ವ್ಯವಸ್ಥೆಗಳು, ಕೆಎಸ್‌ಪಿ ಮೊಬೈಲ್ ಆಪ್, ಎಂ-ಸಿಸಿಟಿಎನ್ಎಎಸ್ ಮೊಬೈಲ್ ಆಪ್, ಸ್ಮಾರ್ಟ್ ಇ-ಬೀಟ್ ಸೇರಿದಂತೆ ವಿವಿಧ ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳು ಸುರಕ್ಷಿತವಾಗಿ ಹೋಸ್ಟ್ ಹಾಗೂ ನಿರ್ವಹಿಸಲ್ಪಡುತ್ತಿವೆ.

ISO/IEC 27001 ಪ್ರಮಾಣಪತ್ರವನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸೂಕ್ಷ್ಮ ಮಾಹಿತಿಗಳು ಹಾಗೂ ಮಹತ್ವದ ಡಿಜಿಟಲ್ ಮೂಲಸೌಕರ್ಯಗಳ ಗೌಪ್ಯತೆ, ಸಮಗ್ರತೆ ಮತ್ತು ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.

ಈ ಪ್ರಮಾಣೀಕರಣದಿಂದ ಕೆಳಕಂಡ ಕ್ಷೇತ್ರಗಳಲ್ಲಿ ಮಹತ್ವದ ಬಲವರ್ಧನೆ ಸಾಧ್ಯವಾಗಲಿದೆ:

* ಮಾಹಿತಿ ಭದ್ರತೆ ಮತ್ತು ಸೈಬರ್ ಪ್ರತಿರೋಧ ಸಾಮರ್ಥ್ಯ

* ಸೈಬರ್ ದಾಳಿಗಳು ಹಾಗೂ ಅನಧಿಕೃತ ಪ್ರವೇಶದ ವಿರುದ್ಧ ಹೆಚ್ಚಿನ ರಕ್ಷಣೆ

ನಾಗರಿಕರ ಮಾಹಿತಿಯ ಸುರಕ್ಷತೆ ಮತ್ತು ಗೌಪ್ಯತೆ.

ವರದಿ : ಮುಬಾರಕ್ ಎಸ್

error: Content is protected !!