ಸೋಯಾಅವರೆ ಬೆಳೆಯುವ ರೈತರೇ ಎಚ್ಚರವಹಿಸಿ

ಹುಕ್ಕೇರಿ ತಾಲೂಕಿನಾದ್ಯಂತ ಬೆಳೆ ಪರಿಸ್ಥಿತಿ ಅವಲೋಕವನ್ನು ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿಯ ವಿಜ್ಞಾನಿಗಳಾದ ಡಾ|| ದತ್ತಾ ಮೇತ್ರೆ, ಉಪ ಕೃಷಿ ನಿರ್ದೇಶಕರಾದ ಶ್ರೀ ಸಹದೇವ ಯರಗೊಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಂ.ಎಸ್.ಪಟಗುಂದಿ ಹಾಗೂ ಹುಕ್ಕೇರಿ ತಾಲೂಕಾ ಕೃಷಿ ಇಲಾಖಾ ಸಿಬ್ಬಂದಿಯವರು ಕೈಗೊಂಡಿದ್ದು , ಇದರಡಿ ತಾಲೂಕಿನ ಹುಕ್ಕೇರಿ, ಬಸ್ತವಾಡ, ಗೌಡವಾಡ, ಬಡಕುಂದ್ರಿ, ಎಲಿಮುನ್ನೋಳಿ, ಬೆಳವಿ, ಗುಡಸ, ಕುರಣಿ, ಕೋಚರಿ, ಹಂಚಿನಾಳ, ಹೆಬ್ಬಾಳ, ಚಿಕ್ಕಾಲಗುಡ್ಡ, ಉ.ಖಾನಾಪೂರ, ಹತ್ತರಗಿ ಮುಂತಾದ ಪ್ರಮುಖ ಸೋಯಾಆವರೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಭೇಟಿಯ ಸಂದರ್ಭದಲ್ಲಿ ತಡವಾಗಿ ಸೊಯಾಅವರೆ ಬಿತ್ತನೆಯಾದ ಕೆಲವು ಪ್ರದೇಶಗಳಲ್ಲಿ ಹಾಗೂ ಮುಂಚಿತವಾಗಿ ಬಿತ್ತನೆಯಾದ ಬಹುತೇಕ ಕಡೆ ಸ್ವಲ್ಪ ಮಟ್ಟಿಗೆ ಕೀಟಗಳು ಹಾಗೂ ರೋಗಗಳ ಹಾವಳಿ ಇರುವುದನ್ನು ಗಮನಿಸಲಾಗಿದೆ. ರೈತರು ತಮ್ಮ ಹೊಲದಲ್ಲಿ ಹಸಿರು ಕಾಯಿಕೊರಕ (ಹೆಲಿಕೋವರ್ಪಾ) ಕಂಡು ಬಂದಲ್ಲಿ ಹತೋಟಿಗಾಗಿ ಕ್ಲೋರಾಂಟ್ರಾನಿಲ್‌ ಪೋಲ್ 18.5% ಎಸ್.ಸಿ ಪ್ರತಿ ಟ್ಯಾಂಕಿಗೆ 5.00 ಮಿಲೀ ಜೊತೆಗೆ 80 ಗ್ರಾಂ 13:0.45 ನೀರಿನಲ್ಲಿ ಕರಗುವ ರಸಗೊಬ್ಬರ ಸೇರಿಸಿ ಸಿಂಪರಣೆ ಮಾಡುವಂತೆ ಕೋರಲಾಗಿದೆ.
ಮುಂಚಿತವಾಗಿ ಬೆಳೆದ ಸೊಯಾಅವರೆಯಲ್ಲಿ ಅಲ್ಲಲ್ಲಿ ಕಾಂಡಕೊರಕ ಹುಳು ಕಂಡುಬಂದಿದ್ದು, ಹತೋಟಿಗಾಗಿ ಥಯಾಮೆಥಾಕ್ಸಮ್ 12.6% + ಲ್ಯಾಂಬ್ಲಾಸೈಹೆಲೋಡ್ರಿನ್ 9.5% 15-20 ಮಿಲೀ ಅಥವಾ 30 ಗ್ರಾಂ ಕಾರ್ಟಾಪ್ ಹೈಡೋಕ್ಲೋರೈಡ್ 50% ಎಸ್.ಪಿ ಪ್ರತಿ 16 ಲೀ ಟ್ಯಾಂಕಿಗೆ ಸೇರಿಸಿ ಸಿಂಪಡಿಸಲು ಸೂಚಿಸಿದೆ. ಮುಂದುವರೆದು, ಅಲ್ಲಲ್ಲಿ ಕಾಂಡಕೊಳೆ ರೋಗದ ಬಾಧೆಯನ್ನು ಕೂಡ ಗಮನಿಸಲಾಗಿದ್ದು, ಹತೋಟಿಗಾಗಿ ಪ್ರತಿ ಟ್ಯಾಂಕಿಗೆ 30 ಗ್ರಾಂ ವೈಟಾವ್ಯಾಕ್ಸ್ ಸಿಂಪರಣೆ ಮಾಡಲು ವಿನಂತಿಸಿದೆ.
ಒಣ ಹವೆ ಮುಂದುವರೆದ ಹಿನ್ನಲೆಯಲ್ಲಿ, ಭೂಮಿಯನ್ನು ಕಳೆರಹಿತ ಇಡುವಂತೆ ಹಾಗೂ ತೇವಾಂಶ ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಲು, ಮತ್ತು ಸಾಧ್ಯವಾದಲ್ಲಿ ತುಂತುರು ನೀರಾವರಿ ಮೂಲಕ ನೀರು ಕೊಡುವಂತೆ ರೈತರಲ್ಲಿ ಕೋರಲಾಗಿದೆ.
ಮಹಾದೇವ.ಎಸ್.ಪಟಗುಂದಿ ಸಹಾಯಕ ಕೃಷಿ ನಿರ್ದೇಶಕರು, ಹುಕ್ಕೇರಿ.

error: Content is protected !!