ಔರಾದನಲ್ಲಿ ಪತ್ರಿಕಾ ದಿನಾಚರಣೆ ಯಡ್ರಾಮಿ ಅವರಗೆ ರಾಜ್ಯ ಮಟ್ಟದ ಕನ್ನಡ ಜಂಗಮ ಪ್ರಶಸ್ತಿ ಪ್ರದಾನ

ಪತ್ರಕರ್ತರಿಗಾಗಿ ಪತ್ರಿಕಾ ಭವನ ನಿರ್ಮಾಣಕ್ಕೆ ಕೈಜೋಡಿಸುವೆ: ಚವ್ಹಾಣ

ಔರಾದ್ : ಔರಾದ್ ಪಟ್ಟಣದಲ್ಲಿ ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಔರಾದ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಆಗುಹೋಗುಗಳನ್ನು ಜನರ ಮುಂದಿಡುವ ಜವಾಬ್ದಾರಿಯುತ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಸಮಸ್ಯೆಗಳು, ಜನರ ಸಂಕಷ್ಟಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬೆಳಕಿಗೆ ತರುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಕರ್ತರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ವಸ್ತುನಿಷ್ಠ ವರದಿಗಳ ಮೂಲಕ ಸಮಾಜದ ಹಿತ ಕಾಪಾಡುತ್ತಿದ್ದಾರೆ. ಔರಾದ್ ತಾಲೂಕಿನಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಪತ್ರಿಕಾ ಭವನ ನಿರ್ಮಾಣದ ಅಗತ್ಯವಿದ್ದು, ಇದಕ್ಕೆ ಸರಕಾರದ ಮಟ್ಟದಲ್ಲಿ ಹಾಗೂ ವೈಯಕ್ತಿಕವಾಗಿ ಅಗತ್ಯ ಸಹಕಾರ ನೀಡಲಾಗುವುದು. ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ದೇವರು ಮಾತನಾಡಿ, ಪತ್ರಿಕೋದ್ಯಮವು ಸಮಾಜದ ಕನ್ನಡಿ ಇದ್ದಂತೆ. ಸತ್ಯ, ನ್ಯಾಯ ಮತ್ತು ಜನಪರ ವಿಚಾರಗಳನ್ನು ಎತ್ತಿಹಿಡಿಯುವ ಮೂಲಕ ಪತ್ರಕರ್ತರು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ಸ್ಥಾನಿಕ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರು ವಿಶೇಷ ಉಪನ್ಯಾಸ ನೀಡಿ, ಪತ್ರಿಕೋದ್ಯಮದ ಇತಿಹಾಸ, ಇಂದಿನ ಸವಾಲುಗಳು ಹಾಗೂ ಗ್ರಾಮೀಣ ಪತ್ರಕರ್ತರ ಜವಾಬ್ದಾರಿಗಳ ಕುರಿತು ವಿವರಿಸಿದರು. ಪತ್ರಕರ್ತರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾಂವೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ನಡುವೆ ಉತ್ತಮ ಬಾಂಧವ್ಯ ಅಗತ್ಯವಾಗಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪತ್ರಕರ್ತರ ಸಹಕಾರವೂ ಮಹತ್ವದ್ದಾಗಿದೆ. ವಸ್ತುನಿಷ್ಠ ವರದಿಗಳು ಆಡಳಿತ ವ್ಯವಸ್ಥೆಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ಹಲವು ಸವಾಲುಗಳ ನಡುವೆಯೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಹಿತಾಸಕ್ತಿ ರಕ್ಷಣೆಗಾಗಿ ಸಂಘವು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ತಾಲೂಕು ಪಂಚಾಯಿತಿ ಇಒ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸಂಘದ ಕಾರ್ಯದರ್ಶಿ ಅನಿಲಕುಮಾರ ದೇಶಮುಖ, ಹಿರಿಯ
ಪತ್ರಕರ್ತರಾದ ಶರಣಪ್ಪ ಚಿಟಮೇ, ರಾಚಯ್ಯ ಸ್ವಾಮಿ, ಚನ್ನಬಸವ ಮೊಕ್ತೆದಾರ್, ರತಿಕಾಂತ ಖರಜಿಗೆ, ರವೀಂದ್ರ ಮೊಕ್ತೆದಾರ್, ಅಂಬ್ರೇಶ ಚಿದ್ರೆ, ಬಾಲಾಜಿ ಕುಂಬಾರ, ಅಹ್ಮದ್ ಜಂಬಗಿ, ಅಮರ ಸ್ವಾಮಿ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ಲಕ್ಷ್ಮಣ ರಾಠೋಡ, ರಾಜಕುಮಾರ ಚಾಂಬೋಳೆ, ಪ್ರಭು ಸ್ವಾಮಿ, ಅಂಬಾದಾಸ ನಳಗೆ, ಶಿವಾನಂದ ಬೇಂದ್ರೆ, ವಿನೋದ ಚಿದ್ರೆ, ಅರವಿಂದ ಮಲ್ಲಿಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಲ್ಲಪ್ಪ ಗೌಡಾ ಸ್ವಾಗತಿಸಿದರು. ರಿಯಾಜಪಾಶಾ ಕೊಳ್ಳುರ್ ನಿರೂಪಿಸಿದರು. ಮನ್ಮಥ ಸ್ವಾಮಿ ವಂದಿಸಿದರು.

ಯಡ್ರಾಮಿಗೆ ಕನ್ನಡ ಜಂಗಮ ಪ್ರಶಸ್ತಿ ಪ್ರದಾನ

ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಬಾಬುರಾವ ಯಡ್ರಾಮಿ ಅವರು ಮೂರು ದಶಕಗಳಿಗೂ ಅಧಿಕ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸತ್ಯ, ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ವರದಿಗಳನ್ನು ನೀಡುತ್ತಾ ಬಂದಿರುವ ಅವರು ಗ್ರಾಮೀಣ ಭಾಗದ ಜನರ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಯಡ್ರಾಮಿ ಅವರ ಪತ್ರಿಕಾ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ‘ಕನ್ನಡ ಜಂಗಮ ಪ್ರಶಸ್ತಿ’ ನೀಡಿ ಗೌರವಿಸಿದೆ.

ಭೋಜನ ವ್ಯವಸ್ಥೆಗೆ ಮೆಚ್ಚುಗೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ರೊಟ್ಟಿ, ಚಪಾತಿ, ಪಲ್ಯ, ಅನ್ನ, ಸಾಂಬಾರು, ಚನ್ನಿ, ಮೊಸರು ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಸಾರ್ವಜನಿಕರು ಭೋಜನದ ವ್ಯವಸ್ಥೆ ಮತ್ತು ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಯೋಜಕರ ಕಾರ್ಯಕ್ಕೆ ಶ್ಲಾಘನೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿನೊಂದಿಗೆ ಊಟದ ವ್ಯವಸ್ಥೆಯೂ ಗಮನ ಸೆಳೆಯಿತು.

ವರದಿ : ರಾಚಯ್ಯ ಸ್ವಾಮಿ

error: Content is protected !!