ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಸಿಎಂ ಜೊತೆ ರಾಘವ್ ಅಣ್ಣಿಗೇರಿ ಚರ್ಚೆ: ವಿಜಯಪುರಕ್ಕೆ ಶೀಘ್ರವೇ ‘ಮಿನಿ ವಿಧಾನಸೌಧ’ದ ಭರವಸೆ

ವಿಜಯಪುರ :
ಉತ್ತರ ಕರ್ನಾಟಕ ಹಾಗೂ ವಿಶೇಷವಾಗಿ ವಿಜಯಪುರ ಜಿಲ್ಲೆಯನ್ನು ಕಾಡುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳ ಕುರಿತು ವಿಜಯಪುರ ಬಿಜೆಪಿ ನಗರ ಯುವ ಮೋರ್ಚಾ ಮಾಜಿ ಅಧ್ಯಕ್ಷ ರಾಘವ್ ಅಣ್ಣಿಗೇರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಹಾಗೂ ರಚನಾತ್ಮಕ ಚರ್ಚೆ ನಡೆಸಿದರು.

ಈ ಭೇಟಿಯ ವೇಳೆ ಜಿಲ್ಲೆಯ ಮೂಲಭೂತ ಸೌಕರ್ಯಗಳ ಕೊರತೆ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ಸಮಸ್ಯೆಗಳನ್ನು ಎಳೆಎಳೆಯಾಗಿ ಮುಖ್ಯಮಂತ್ರಿಗಳ ಮುಂದಿಟ್ಟ ಅವರು, ಶೀಘ್ರವೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಮಿನಿ ವಿಧಾನಸೌಧ ನಿರ್ಮಾಣದ ಭರವಸೆ: ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಇಂದಿಗೂ ಪ್ರಾಚೀನ ಸ್ಮಾರಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿಯನ್ನು ಸಿಎಂ ಗಮನಕ್ಕೆ ತರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ವಿಜಯಪುರದಲ್ಲಿ ಶೀಘ್ರದಲ್ಲೇ ಮಿನಿ ವಿಧಾನಸೌಧ ನಿರ್ಮಿಸಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಭರವಸೆ ನೀಡಿದ್ದಾರೆ.
ಕೃಷ್ಣಾ ಸಂತ್ರಸ್ತರಿಗೆ ಪರಿಹಾರದ ಆಗ್ರಹ: ಕೃಷ್ಣಾ ನದಿ ಮುಳುಗಡೆ ಪ್ರದೇಶದಲ್ಲಿ ತಮ್ಮ ಫಲವತ್ತಾದ ಕೃಷಿಭೂಮಿ ಕಳೆದುಕೊಂಡ ಸಾವಿರಾರು ಸಂತ್ರಸ್ತರಿಗೆ ಇಂದಿಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಅವರಿಗೆ ತಕ್ಷಣ ನ್ಯಾಯಸಮ್ಮತ ಪರಿಹಾರ ಒದಗಿಸಿ, ಬದುಕು ಕಟ್ಟಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

ನಗರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ದೂರು: ವಿಜಯಪುರ ನಗರದ 24×7 ಕುಡಿಯುವ ನೀರಿನ ಯೋಜನೆ, ಯುಜಿಡಿ ವ್ಯವಸ್ಥೆ, ಭೂಗತ ವಿದ್ಯುತ್ ಕೇಬಲ್ ಕಾಮಗಾರಿ ಹಾಗೂ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಸ್ಟರ್ ಪ್ಲಾನ್ ಬಗ್ಗೆ ಚರ್ಚಿಸಲಾಯಿತು.
ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ ‘ನಮೋ ನಗರ’ದ ಕಳಪೆ ಕಾಮಗಾರಿ, ಸರ್ಕಾರಿ ಕನ್ನಡ ಶಾಲೆಗಳ ದುಸ್ಥಿತಿ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ ಸಿಎಂಗೆ ಸಮಗ್ರ ಮಾಹಿತಿ ನೀಡಲಾಯಿತು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
ಜನಪ್ರತಿನಿಧಿಗಳಿಗೆ ಕರೆ:
ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಾಳ್ಮೆಯಿಂದ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳಿಗೆ ರಾಘವ್ ಅಣ್ಣಿಗೇರಿ ಅವರು ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪ, ಸದನ ಬಹಿಷ್ಕಾರದಲ್ಲಿ ಕಾಲಹರಣ ಮಾಡದೆ, ಸಾರ್ವಜನಿಕರ ತೆರಿಗೆ ಹಣವನ್ನು ಸದ್ಬಳಕೆ ಮಾಡಿಕೊಂಡು ಜನರ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಬೇಕು ಎಂದು ಅವರು ಇದೇ ವೇಳೆ ಎಲ್ಲಾ ಶಾಸಕರಿಗೆ ಆಗ್ರಹಿಸಿದ್ದಾರೆ.

ವರದಿ: ಅಜೀಜ ಪಠಾಣ

error: Content is protected !!