ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳು, ಕಠಿಣ ಪರಿಶ್ರಮದಿಂದ ಗುರಿ ಸಾಧಿಸಿ : ಸಿಪಿಐ ಠಾಕೂರ್

ಔರಾದ್ : ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಶಿಸ್ತು, ಸೇವಾ ಮನೋಭಾವ, ಜವಾಬ್ದಾರಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಹೊಂದಿದ್ದರೆ ಈಗಿನಿಂದಲೇ ಕಠಿಣ ಪರಿಶ್ರಮ ಆರಂಭಿಸಬೇಕು ಎಂದು ಸಿಪಿಐ ರಾಘುವೀರಸಿಂಗ್ ಠಾಕೂರ್ ಹೇಳಿದರು.
ಪಟ್ಟಣದ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳೇ ದೇಶದ ಮುಂದಿನ ಭವಿಷ್ಯದ ಪ್ರಜೆಗಳು. ಶಾಲೆಯಿಂದಲೇ ಸೇವಾ ಮನೋಭಾವ ಆರಂಭಿಸಿ, ಮುಂದಿನ ದಿನಗಳಲ್ಲಿ ದೇಶ ಸೇವೆಗೆ ಸಿದ್ಧರಾಗಬೇಕು. ಸಕ್ರಿಯ ಕಲಿಕೆಯೊಂದಿಗೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದ ಅವರು, ಶುದ್ಧ ಗಾಳಿ, ನೀರು ಹಾಗೂ ಮಣ್ಣಿನಿಂದ ಮಾತ್ರ ಜೀವ ಸಂಕುಲ ಆರೋಗ್ಯವಾಗಿ ಬದುಕಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ರಕ್ಷಣೆಯ ಹೊಣೆ ಹೊತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕು. ‘ಏಕ ಪೇಡ್ ಮಾ ಕೆ ನಾಮ’ ಅಭಿಯಾನದಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರೇಷ್ಮಾ ಕೌರ್ ಮಾತನಾಡಿ, ವಿದ್ಯಾರ್ಥಿಗಳು ಶ್ರಮಜೀವಿಗಳಾಗಿ ಉತ್ತಮ ಗುರಿ ಹೊಂದಬೇಕು. ಗುರಿಯಿಲ್ಲದೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಪಾಲಕರ ಕನಸು ನನಸು ಮಾಡಲು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಶಿಸ್ತು, ಪರೋಪಕಾರದ ಮನೋಭಾವ, ಓದುವ ಹವ್ಯಾಸ ಬೆಳೆಸಿಕೊಂಡು ಗುರು-ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.

ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ. ಎಲ್. ಬಲಬೀರ್ ಸಿಂಗ್, ಪ್ರಾಂಶುಪಾಲೆ ದೀನಾ ಜ್ಯೋತಿ, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವೇಳೆ ನೂತನವಾಗಿ ಆಯ್ಕೆಯಾದ ಹೆಡ್ ಬಾಯ್ ಸಾರ್ಥಕ ಜ್ಞಾನೋಬಾ, ಹೆಡ್ ಗರ್ಲ್ ಸೀರಥ್ ರಾಜೇಶಕುಮಾರ, ಡೆಪ್ಯೂಟಿ ಹೆಡ್ ಬಾಯ್ ಶೇಖ್ ಫೈಜಾನ್ ರೈಯಿಸ್ ಹಾಗೂ ಡೆಪ್ಯೂಟಿ ಹೆಡ್ ಗರ್ಲ್ ಚೈತ್ರಾಲಿ ಹನ್ಸರಾಜ ಅವರಿಗೆ ಪ್ರತಿಜ್ಞಾ ಸ್ವೀಕಾರ ಮಾಡಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ವರದಿ : ರಾಚಯ್ಯ ಸ್ವಾಮಿ

error: Content is protected !!