
ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ ಹಳೆಯ ಕಟ್ಟಡದ ಹೆಸರಿನಲ್ಲಿ ಸರ್ಕಾರಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ, ಮರು ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಅನುಮತಿ ನೀಡಬಾರದು ಎಂದು ವಕೀಲ ವಿಜಯಕುಮಾರ ನಾತೆ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಹುಮನಾಬಾದ್ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ್ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಆರೋಪಗಳೇನು?
ವಿಜಯಕುಮಾರ ನಾತೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಿಳಿಸಿದ್ದೇನೆಂದರೆ, ದುಬಲಗುಂಡಿ ಗ್ರಾಮ ಪಂಚಾಯತ ಹಳೆಯ ಕಟ್ಟಡವು ನಿಜಾಮ ಆಡಳಿತ ಕಾಲದ ಠಾಣಾ ಕಟ್ಟಡವಾಗಿತ್ತು. ಆದ್ದರಿಂದ ಇದು ಐತಿಹಾಸಿಕ ಕಟ್ಟಡವಾಗಿದ್ದು, ತೆರವುಗೊಳಿಸುವ ಮುನ್ನ ಪುರಾತತ್ವ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಆದರೆ 17-05-2025 ರಂದು ಆಗಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಘುನಾಥ, ಮಾಜಿ ಅಧ್ಯಕ್ಷ ನಾಗರಾಜ ಭೋಜಗುಂಡಿ ಮತ್ತು ಗುತ್ತಿಗೆದಾರ ಗಣಪತಿ ಅವರು ಕೂಡಿ ಕಟ್ಟಡ ಕಟ್ಟದೆ, ಎಂ.ಬಿ. ರೆಕಾರ್ಡ್ ಮಾಡದೆ ಸರ್ಕಾರದ ಹಣವನ್ನು ತಮ್ಮ ಅಧಿಕಾರ ದುರುಪಯೋಗಪಡಿಸಿ ಗುತ್ತಿಗೆದಾರರ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ ಹಿಂದಿನ ಅಧ್ಯಕ್ಷರು 10 ತಿಂಗಳಿಂದ ಸಾಮಾನ್ಯ ಸಭೆ ಕರೆಯದೆ, ಯಾವುದೇ ಸಭೆಯ ಅನುಮತಿ ಇಲ್ಲದೆ ಕಟ್ಟಡ ತೆರವುಗೊಳಿಸಲು ನಕಲಿ ದಾಖಲೆ ಸೃಷ್ಟಿಸಿ ಎ.ಇ.ಇ. ಅವರಿಂದ ಆದೇಶ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ದೂರು ಸಲ್ಲಿಕೆ
ಈ ಕುರಿತು 20-05-2026 ರಂದು ತಾಲೂಕು ಪಂಚಾಯತ ಇ.ಓ. ಅವರಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಹಣ ವಸೂಲಾತಿ ಮಾಡುವಂತೆ ಕೋರಿದ್ದೇನೆ ಎಂದು ವಿಜಯಕುಮಾರ ನಾತೆ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ತಪ್ಪು ದಾರಿಗೆ ತಿರುಗಿಸಲು ಹಾಗೂ ಅಕ್ರಮವನ್ನು ಮುಚ್ಚಿಹಾಕಲು ಕಟ್ಟಡ ತೆರವುಗೊಳಿಸುವ ತಯಾರಿ ನಡೆಯುತ್ತಿದೆ. ಈಗಾಗಲೇ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು “ಕಟ್ಟಡ ಕಟ್ಟಿಲ್ಲ” ಎಂಬ ವರದಿ ನೀಡಿದ್ದಾರೆ. ಹೀಗಿದ್ದರೂ ವಿಚಾರಣೆ ಹೆಸರಿನಲ್ಲಿ ಕಾಲಹರಣ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಡಿಕೆಗಳು
1. ಮರು ತನಿಖೆ ಪೂರ್ಣಗೊಳ್ಳುವವರೆಗೂ ಕಟ್ಟಡ ತೆರವುಗೊಳಿಸಲು ಯಾವುದೇ ಅನುಮತಿ ನೀಡಬಾರದು.
2. ಪ್ರಕರಣದಲ್ಲಿ ತಾಲೂಕು ಪಂಚಾಯತ ಇ.ಓ. ಹುಮನಾಬಾದ್ ಅವರನ್ನು ಸಹ ಹೊಣೆಗಾರರನ್ನಾಗಿ ಮಾಡಬೇಕು.
3. 10-08-2026 ರಂದು ನಿಗದಿಯಾಗಿರುವ ವಿಚಾರಣೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು, ಎತ್ತಿರುವ ಹಣ ಮತ್ತು ಕಟ್ಟಡದ ಸ್ಥಿತಿ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ಆದೇಶಿಸಬೇಕು.
ಈ ಬೇಡಿಕೆಗಳಿಗೆ ಕ್ರಮ ವಿಳಂಬವಾದರೆ ಸಾರ್ವಜನಿಕ ಹಿತದೃಷ್ಟಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ವಿಜಯಕುಮಾರ ನಾತೆ ಎಚ್ಚರಿಕೆ ನೀಡಿದ್ದಾರೆ.
