ಹುಲಸೂರ ಪಟ್ಟಣ ಪಂಚಾಯತ್ ರಚನೆಗೆ ವಿಳಂಬ ಸಚಿವ ಈಶ್ವರ್ ಖಂಡ್ರೆಗೆ ಆನಂದ ದೇವಪ್ಪ ಮನವಿ

ಬಸವಕಲ್ಯಾಣ : ತಾಲೂಕಿನ ರಾಜೇಶ್ವರ ಹಾಗೂ ಹುಲಸೂರ ಗ್ರಾಪಂಗಳನ್ನು ರಾಜ್ಯ ಸರ್ಕಾರ ಪಟ್ಟಣ ಪಂಚಾಯತ್ ಯಾಗಿ ಮೇಲ್ದರ್ಜೆಗೇರಿಸಿ ಅನುಮೋದನೆ ನೀಡಿದ್ದರೂ ಹುಲಸೂರ ಪಟ್ಟಣ ಪಂಚಾಯತ್ ಇನ್ನೂ ಕಾರ್ಯಾರಂಭ ಮಾಡದಿರುವುದು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಹುಲಸೂರ ತಾಲೂಕಿನ ಯುವ ಮುಖಂಡ ಆನಂದ ದೇವಪ್ಪಾ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜೇಶ್ವರ ಗ್ರಾಪಂ ಈಗಾಗಲೇ ಪಪಂಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಡಳಿತಾಧಿಕಾರಿ ಯನ್ನೂ ಸರ್ಕಾರ ನೇಮಿಸಿ ಅಗತ್ಯ ಆಡಳಿತ ವ್ಯವಸ್ಥೆ ಕಲ್ಪಿಸಿದೆ. ಆದರೆ ನೂತನ ತಾಲೂಕು ಕೇಂದ್ರ ಹುಲಸೂರಲ್ಲಿ ಸರ್ಕಾರದಿಂದ ಪಪಂಗೆ ಮೇಲ್ದರ್ಜೆಗೇರಿಸುವ ಆದೇಶ ಹೊರಡಿಸಿದ್ದರೂ ಇಲ್ಲಿವರೆಗೆ ಆಡಳಿತಾತ್ಮಕ ಪ್ರಕ್ರಿಯೆಗಳು ಆರಂಭವಾಗಿಲ್ಲ. ಆಡಳಿತಾಧಿಕಾರಿ ನೇಮಕ ಮಾಡದ್ದರಿಂದ ಗ್ರಾಮ ಪಂಚಾಯತಿಯೇ ಮುಂದುವರಿದಿದ್ದು, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತಾಲೂಕು ಕೇಂದ್ರವಾಗಿ ಘೋಷಣೆಯಾದ ನಂತರ ಹುಲಸೂರಲ್ಲಿ ಜನಸಂಖ್ಯೆ, ವ್ಯಾಪಾರ-ವಹಿವಾಟು ಹಾಗೂ ನಗರೀಕರಣ ವೇಗವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಜಾರಿಗೆ ವಿಳಂಬ ಆಗುತ್ತಿರುವುದರಿಂದ ಮೂಲ ಸೌಕರ್ಯ ಅಭಿವೃದ್ಧಿ ನಗರ ಯೋಜನೆ, ಸ್ವಚ್ಚತೆ, ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ನಗರಾಭಿವೃದ್ಧಿ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಚಿವ ಈಶ್ವರ ಖಂಡ್ರೆ ಮನವಿ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹುಲಸೂರ ಪಪಂ ಜಾರಿಯಾಗದಿರುವ ಕಾರಣ ಹಾಗೂ ಪ್ರಸ್ತುತ ಸ್ಥಿತಿಗತಿ ಕುರಿತು ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದರು. ಅಲ್ಲದೇ ಅಗತ್ಯ ವರದಿ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಶರಣಯ್ಯ ಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು.

error: Content is protected !!