ನಾಲ್ಕು ದಶಕಗಳಿಂದ ಬಾಕಿ ಉಳಿದಿರುವ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಿ: ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಮನವಿ

ಹುಮನಾಬಾದ : ಕಾರಂಜಾ ಜಲಾಶಯ ನಿರ್ಮಾಣದಿಂದಾಗಿ 1980ರ ದಶಕದಲ್ಲಿ ಭೂಮಿ, ಮನೆ ಮತ್ತು ಜೀವನೋಪಾಯ ಕಳೆದುಕೊಂಡ ಸಾವಿರಾರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರ ನೀಡುವಂತೆ ಆಗ್ರಹಿಸಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಬೀದರ ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿದೆ.

1981 ರಿಂದ 1986ರ ಅವಧಿಯಲ್ಲಿ ಕಾರಂಜಾ ಜಲಾಶಯ ನಿರ್ಮಾಣದ ಪರಿಣಾಮವಾಗಿ ಬೀದರ ಜಿಲ್ಲೆಯ ಹಲವು ಗ್ರಾಮಗಳು ಮುಳುಗಡೆಯಾದವು. ಆಗಿನಿಂದ ಇಂದಿನವರೆಗೆ ನಾಲ್ಕು ದಶಕಗಳಿಂದ ಸಂತ್ರಸ್ತರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಅನೇಕ ಸರ್ಕಾರಗಳು ಬಂದಿವೆ, ಹೋದವು. ಹಲವು ಭರವಸೆಗಳು ಸಿಕ್ಕಿವೆ. ಆದರೆ ಇಂದಿಗೂ ಮಾನವೀಯ ಹಾಗೂ ವೈಜ್ಞಾನಿಕ ಮಾನದಂಡದಲ್ಲಿ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಭರವಸೆ ನೆನಪು
2026ರ ಏಪ್ರಿಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಅವರು ಬೀದರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರ ನಿಯೋಗವನ್ನು ಭೇಟಿ ಮಾಡಿ, ಬೆಂಗಳೂರಿಗೆ ಆಹ್ವಾನಿಸಿ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಗ ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಇದು ಯಾವುದೇ ರಾಜಕೀಯ ಪಕ್ಷದ ವಿರುದ್ಧದ ಹೋರಾಟವಲ್ಲ. ಇದು ನಾಲ್ಕು ದಶಕಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಮಾನವೀಯ ಹೋರಾಟ ಎಂದು ಸಮಿತಿ ಸ್ಪಷ್ಟಪಡಿಸಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನಪರ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗಿ ನಿಲ್ಲಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸಮಿತಿಯ 5 ಪ್ರಮುಖ ಮನವಿಗಳು:
1. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ವಿಶೇಷ ಚರ್ಚೆ ನಡೆಸಬೇಕು.
2. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಬಂಧಿತ ಸಚಿವರು, ಅಧಿಕಾರಿಗಳು ಮತ್ತು ಸಂತ್ರಸ್ತರ ಪ್ರತಿನಿಧಿಗಳ ತುರ್ತು ಸಭೆ ಕರೆಯಬೇಕು.
3. ನಾಲ್ಕು ದಶಕಗಳಿಂದ ಬಾಕಿ ಉಳಿದಿರುವ ಪರಿಹಾರವನ್ನು ಮಾನವೀಯ ದೃಷ್ಟಿಕೋನ ಮತ್ತು ವೈಜ್ಞಾನಿಕ ಆಧಾರದ ಮೇಲೆ ಪರಿಶೀಲಿಸಿ ನ್ಯಾಯಸಮ್ಮತ ಪರಿಹಾರ ಘೋಷಿಸಬೇಕು.
4. ಕಾರಂಜಾ ಮುಳುಗಡೆ ಸಂತ್ರಸ್ತರ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಕಾಲಬದ್ಧ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು.
5. 1981-1986ರಲ್ಲಿ ವಿತರಿಸಿದ ಪರಿಹಾರ ಹಣದ ಬಡ್ಡಿ ಮೊತ್ತದಲ್ಲಿ 12% ರಷ್ಟು ಮೊತ್ತವನ್ನು ಕೆಲವು ಸಂತ್ರಸ್ತರಿಗೆ ಮಾತ್ರ ನೀಡಲಾಗಿದೆ. ಬಾಕಿ ಇರುವವರಿಗೆ ಕಾಲಮಿತಿಯೊಳಗೆ ವಿತರಿಸಬೇಕು.

ಸಚಿವರಾದ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಈ ಐತಿಹಾಸಿಕ ಹೋರಾಟಕ್ಕೆ ನೈತಿಕ ಮತ್ತು ರಾಜಕೀಯ ಬೆಂಬಲ ನೀಡಿ, ಸಾವಿರಾರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.

ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಅಧ್ಯಕ್ಷರು
ಲಕ್ಷ್ಮೀಬಾಯಿ ಸಂಗೋಳ್ಳಗಿ, ರಾಜಕುಮಾರ ಕಮಲಪೂರೆ, ರಾಜಕುಮಾರ ಬುಸ್ಸಾ ರಂಜೋಳಖೇಣಿ, ರಾಜಕುಮಾರ ಕೋಸಮ, ವೀರೇಂದ್ರ ಭತಮರ್ಗೆ, ವಿದ್ಯಾವತಿ ಔರಾದ (ಎಸ್), ಮಹೇಶ ಕಮಲಪೂರ, ಮಹೇಶ ನೆಲವಾಳ, ಯೂಸುಫ್ ಮಿಯ್ಯಾ ರೇಕುಳಗಿ, ಶಂಕರೆಪ್ಪ ಬಂಬಳಗಿ, ಚಂದ್ರಶೇಖರ ಮುತ್ತಣ್ಣಾ, ಎಂ.ಡಿ.ಅಹ್ಮದ ಮಿಯ್ಯಾ ಬಗದಲ, ಶಿವಕುಮಾರ ಸ್ವಾಮಿ ಬಾವಗಿ, ಮಾದಪ್ಪಾ ಮೌದೆ ಮತ್ತು ಇತರ ನಿರ್ದೇಶಕರು,
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ, ಉಪಸ್ಥಿತರಿದ್ದರು.

error: Content is protected !!