ಅಥಣಿ : ತಾಲೂಕಿನ ವಿವಿಧ ಭಾಗಗಳಲ್ಲಿ ಎಐ (Al)ಕ್ಯಾಮೆರಾಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆಲ ಮೋಟಾರ್ ಸೈಕಲ್ ಸವಾರರು ತಮ್ಮ ವಾಹನಗಳ ನಂಬರ್ ಪ್ಲೇಟ್‌ಗಳನ್ನು ತೆಗೆದು ಸಂಚರಿಸುತ್ತಿರುವುದು ಕಂಡುಬಂದಿದೆ.
ಅಥಣಿ ಡಿಎಸ್ಪಿ ಪ್ರಶಾಂತ ಮುನ್ನೊಳಿ ಅವರ ನಿರ್ದೇಶನದಂತೆ, ನಂಬರ್ ಪ್ಲೇಟ್ ಇಲ್ಲದೆ ರಸ್ತೆಗಿಳಿದ ಮೋಟಾರ್ ಸೈಕಲ್‌ಗಳನ್ನು ಪೊಲೀಸರು ತಡೆದು, ವಾಹನಗಳಿಗೆ ಕಡ್ಡಾಯವಾಗಿ ನಂಬರ್ ಪ್ಲೇಟ್ ಅಳವಡಿಸಿದ ಬಳಿಕವೇ ಬಿಡುಗಡೆ ಮಾಡಿದರು. ಇದೇ ವೇಳೆ ಕಳುವಾಗಿದ್ದ ಹಾಗೂ ಕಳೆದುಹೋಗಿದ್ದ ಹಲವು ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ಸಿಈಐಆರ್ (CEIR PORTAL )ಮೂಲಕ ಪತ್ತೆಹಚ್ಚಿ ಸುಮಾರು 50 ಮೊಬೈಲಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಪಿ ಪ್ರಶಾಂತ ಮುನ್ನೊಳಿ ಅವರು ವಾಹನ ಸವಾರರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿ, “ಎಐ ಕ್ಯಾಮೆರಾಗಳ ಕಣ್ಣಾವಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಬಹುದು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಎಲ್ಲ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ನಾಲ್ಕು ಚಕ್ರದ ವಾಹನ ಸವಾರರು ಸೀಟ್ ಬೆಲ್ಟ್ ಧರಿಸುವುದು, ದ್ವಿಚಕ್ರ ವಾಹನ ಸವಾರರು ಹೆಲೈಟ್ ಕಡ್ಡಾಯವಾಗಿ ಬಳಸುವುದು, ವಾಹನದ ಆರ್‌ಸಿ, ಚಾಲನಾ ಪರವಾನಗಿ (ಲೈಸೆನ್ಸ್), ವಿಮೆ (ಇನ್ಸೂರೆನ್ಸ್) ದಾಖಲಾತಿಗಳನ್ನು ಹೊಂದಿರುವುದು ಹಾಗೂ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿರಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ನ್ಯಾಯವಾದಿ ಸನದಿ, ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ಪರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಕಳುವಾದ ಹಾಗೂ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಿಂತಿರುಗಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಪೊಲೀಸ್ ಇಲಾಖೆಯ ಈ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಈವೇಳೆ ಸಿಪಿಐಸಂತೋಷಹಳ್ಳೂರ. ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ, ಮಲ್ಲಿಕಾರ್ಜುನ ತಳವಾರ. ಹೆಚ್ಚುವರಿ ಪಿಎಸ್‌ಐ ನಿಖೀಲ್ ಕಾಂಬಳೆ.ಪ್ರೊಬೇಷನರಿ ಪಿಎಸ್‌ಐಗಳಾದ ಪ್ರಶಾಂತ ಬಾಗೇವಾಡಿ. ಆರತಿ ತೇಲಿ. ಹರೀಶ್ ಪಿ.ಕೆ. ಸೇರಿದಂತೆ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು.
ವರದಿ : ಭರತೇಶ್ ನಿಡೋಣಿ
