ಡಾ. ಬಸವಲಿಂಗ ಅವಧೂತರು ಈ ಹೆಸರು ಕೇಳಿದ ತಕ್ಷಣವೇ ಮನಸ್ಸಿನಲ್ಲಿ ಒಂದು ಪವಿತ್ರವಾದ ಆಲೋಚನೆ ಶುರುವಾಗುತ್ತದೆ. ಆಕಾಶದಿಂದ ಬೀಳುವ ಮಳೆಹನಿಗಳಲ್ಲಿ ದೇವರ ಕರುಣೆ ಕಾಣಿಸುತ್ತದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯಲ್ಲಿ ಆ ಭಗವಂತನ ಸೌಂದರ್ಯ ಕಾಣಿಸುತ್ತದೆ. ದೇವಸ್ಥಾನದ ಗಂಟೆಯ ನಾದದಲ್ಲಿ ದೈವಿಕ ಸ್ಪರ್ಶ ಕೇಳಿಸುತ್ತದೆ. ವೇದಮಂತ್ರಗಳ ಧ್ವನಿಯಲ್ಲಿ ಮನಸ್ಸಿಗೆ ಹೇಳಲಾರದಷ್ಟು ಪ್ರಶಾಂತತೆ ಸಿಗುತ್ತದೆ. ಆದರೆ ಶ್ರಾವಣ ಮಾಸದ ನಿಜವಾದ ಮಹಿಮೆ ಕೇವಲ ಹೊರಗಡೆ ಮಾಡುವ ಪೂಜೆ, ವ್ರತ, ಆಚಾರಗಳಲ್ಲಿ ಮಾತ್ರ ಇಲ್ಲ. ಮನುಷ್ಯ ತನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು, ತನ್ನಲ್ಲಿರುವ ಅಜ್ಞಾನವನ್ನು ಓಡಿಸಿ, ಭಕ್ತಿ, ಧರ್ಮ, ಪ್ರೀತಿ ಮತ್ತು ಮಾನವೀಯತೆ ಎಂಬ ಬೆಳಕನ್ನು ಬೆಳಗಿಸುವುದರಲ್ಲೇ ಶ್ರಾವಣ ಮಾಸದ ನಿಜವಾದ ಪವಿತ್ರತೆ ಇದೆ.
ದೇವರು ನಮಗೆ ನೀಡಿದ ಈ ಮನುಷ್ಯ ಜನ್ಮ ತುಂಬಾ ಅಮೂಲ್ಯವಾದದ್ದು. ಎಷ್ಟೋ ಜನ್ಮಗಳ ಪುಣ್ಯದಿಂದ ಸಿಕ್ಕಿರುವ ಈ ಶರೀರವನ್ನು ಕೇವಲ ಹಣ ಸಂಪಾದಿಸುವುದಕ್ಕೆ, ಆಸ್ತಿ ಮಾಡುವುದಕ್ಕೆ, ಸುಖ-ಭೋಗಗಳಿಗಾಗಿ ಓಡಾಡುವುದಕ್ಕೆ ಮಾತ್ರ ಬಳಸಿದರೆ ಈ ಜೀವನದ ಅರ್ಥವೇನು? ಮನುಷ್ಯ ಎಷ್ಟು ಸಂಪಾದಿಸಿದ ಅನ್ನೋದು ಮುಖ್ಯವಲ್ಲ. ಎಷ್ಟು ಜನರನ್ನು ಪ್ರೀತಿಸಿದ, ಎಷ್ಟು ಧರ್ಮದಿಂದ ಬಾಳಿದ, ಎಷ್ಟು ಜನರಿಗೆ ಸಹಾಯ ಮಾಡಿದ, ತನ್ನಿಂದ ಎಷ್ಟು ಜನರ ಕಣ್ಣೀರು ಒರೆಸಲ್ಪಟ್ಟಿತು, ತನ್ನ ಕೈಯಿಂದ ಎಷ್ಟು ಒಳ್ಳೆಯ ಕೆಲಸಗಳು ನಡೆದವು ಎಂಬುದೇ ನಿಜವಾದ ಜೀವನದ ಯಶಸ್ಸು.
ಹಣ ಬೇಕು, ಆಸ್ತಿ ಬೇಕು, ಕುಟುಂಬದ ಭದ್ರತೆಯೂ ಬೇಕು… ಆದರೆ ಅವುಗಳಿಗಾಗಿ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಬಾರದು. ಮನೆಗಳನ್ನು ಕಟ್ಟಿಕೊಳ್ಳಬೇಕು, ಆದರೆ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು. ಆಸ್ತಿ ಗಳಿಸಬೇಕು, ಆದರೆ ಒಳ್ಳೆಯ ಸಂಸ್ಕಾರವನ್ನು ಕಳೆದುಕೊಳ್ಳಬಾರದು. ಏಕೆಂದರೆ ಮನುಷ್ಯ ಈ ಪ್ರಪಂಚವನ್ನು ಬಿಟ್ಟು ಹೋಗುವಾಗ ತನ್ನ ಜೊತೆ ಬಂಗಾರ, ಭೂಮಿ ಅಥವಾ ಬಂಗಲೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಅವನ ಜೊತೆಗೆ ಬರುವುದು ಅವನ ಕರ್ಮ, ಧರ್ಮ, ಅವನು ಹಂಚಿದ ಪ್ರೀತಿ ಮತ್ತು ನೀಡಿದ ಸಂಸ್ಕಾರ ಮಾತ್ರ.
ಅದಕ್ಕೇ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವಾಗ ಕೇವಲ “ನನ್ನ ಮಗುವಿಗೆ ಎಷ್ಟು ಆಸ್ತಿ ಕೊಡಬೇಕು?” ಎಂದು ಮಾತ್ರ ಯೋಚಿಸಬಾರದು. “ನನ್ನ ಮಗುವನ್ನು ಎಷ್ಟು ಒಳ್ಳೆಯ ಮನುಷ್ಯನನ್ನಾಗಿ ಬೆಳೆಸಬೇಕು?” ಎಂದೂ ಯೋಚಿಸಬೇಕು. ಆಸ್ತಿ-ಪಾಸ್ತಿ ಕೊಡುವುದು ದೊಡ್ಡದೇ. ಆದರೆ ಅದಕ್ಕಿಂತ ದೊಡ್ಡದು ಮಗುವಿನ ಮನಸ್ಸಿನಲ್ಲಿ ಭಕ್ತಿ, ಧರ್ಮ, ದಯೆ, ಹಿರಿಯರ ಬಗ್ಗೆ ಗೌರವ, ತಂದೆ-ತಾಯಿಯ ಸೇವೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಗುಣವನ್ನು ಬಿತ್ತುವುದು.
ಆಸ್ತಿ ಮಗುವಿಗೆ ಸೌಕರ್ಯ ಕೊಡಬಹುದು, ಆದರೆ ಸಂಸ್ಕಾರ ಮಾತ್ರ ಅವನಿಗೆ ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ದಿಕ್ಸೂಚಿಯಾಗುತ್ತದೆ. ಆಸ್ತಿ ಕಳೆದುಹೋಗಬಹುದು, ಹಣ ಖಾಲಿಯಾಗಬಹುದು… ಆದರೆ ಬಾಲ್ಯದಲ್ಲಿ ಮನಸ್ಸಿನಲ್ಲಿ ಬಿತ್ತಿದ ಒಳ್ಳೆಯ ಸಂಸ್ಕಾರ ಮಾತ್ರ ಜೀವನವಿಡೀ ಅವನನ್ನು ಕಾಪಾಡುತ್ತದೆ. ಸಂಸ್ಕಾರವಿರುವ ಮಗು ಬಡತನದಲ್ಲಿದ್ದರೂ ಗೌರವದಿಂದ ಬಾಳುತ್ತಾನೆ. ಕಷ್ಟ ಬಂದರೂ ಧೈರ್ಯವಾಗಿ ನಿಲ್ಲುತ್ತಾನೆ. ಸಂಪತ್ತು ಬಂದರೂ ಅಹಂಕಾರ ಪಡುವುದಿಲ್ಲ. ಅಧಿಕಾರ ಬಂದರೂ ವಿನಯದಿಂದ ಇರುತ್ತಾನೆ. ತಂದೆ-ತಾಯಿಯನ್ನು ಮರೆಯುವುದಿಲ್ಲ. ಹಿರಿಯರನ್ನು ಗೌರವಿಸುತ್ತಾನೆ. ತನಗಿರುವುದರಲ್ಲಿ ಸ್ವಲ್ಪವನ್ನು ಇತರರಿಗೆ ಹಂಚುತ್ತಾನೆ. ಅದೇ ನಿಜವಾದ ಆಸ್ತಿ.
ಅದಕ್ಕಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ದೇವರ ನಾಮಸ್ಮರಣೆ ಕಲಿಸಬೇಕು. ಬೆಳಿಗ್ಗೆ ಎದ್ದು ದೇವರಿಗೆ ಮತ್ತು ತಂದೆ-ತಾಯಂದಿರಿಗೆ ನಮಸ್ಕರಿಸುವುದನ್ನು ಕಲಿಸಬೇಕು. ಹಿರಿಯರನ್ನು ಗೌರವಿಸುವುದು, ಹಸಿದವರಿಗೆ ಅನ್ನ ಹಾಕುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು, ಕಷ್ಟಪಟ್ಟು ಕೆಲಸ ಮಾಡುವುದು, ಸತ್ಯ ಮಾತಾಡುವದು ವುದು ಮತ್ತು ತಪ್ಪಾದಾಗ ಅದನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಕಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, “ನೀನು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ನಿನ್ನನ್ನು ಬೆಳೆಸಿದ ಕೈಗಳನ್ನು ಎಂದಿಗೂ ಮರೆಯಬೇಡ” ಎಂಬ ಮಾತನ್ನು ಅವರ ಮನಸ್ಸಿನಲ್ಲಿ ಆಳವಾಗಿ ಬಿತ್ತುಬೇಕು.
ಏಕೆಂದರೆ ನಮ್ಮ ಜೀವನದ ಮೊದಲ ದೇವಸ್ಥಾನ ಅಮ್ಮನ ಮಡಿಲು. ಮೊದಲ ಗುರು ಅಮ್ಮನೇ. ನಮ್ಮ ಮೊದಲ ಹೆಜ್ಜೆಗೆ ಆಧಾರ ಅಪ್ಪ. ನಾವು ಬಿದ್ದಾಗ ಎತ್ತಿ ನಿಲ್ಲಿಸಿದ ಕೈಗಳು ತಂದೆ-ತಾಯಿಯವೇ. ನಾವು ಅತ್ತಾಗ ನಮ್ಮ ಕಣ್ಣೀರನ್ನು ತಮ್ಮ ಕಣ್ಣೀರೆಂದು ಭಾವಿಸಿದವರು ಅವರು. ನಮಗೆ ಹಸಿವಾದಾಗ ತಾವು ಹಸಿದಿದ್ದರೂ ನಮಗೆ ಅನ್ನ ಉಣಿಸಿದವರು ಅವರು. ನಮಗೆ ಜ್ವರ ಬಂದಾಗ ರಾತ್ರಿಯಿಡೀ ನಿದ್ದೆ ಮಾಡದೆ ಕಾಯ್ದವರು ಅವರು. ಅಂತಹ ತಂದೆ-ತಾಯಿ ವಯಸ್ಸಾದಾಗ ನಮ್ಮ ಪ್ರೀತಿಗಾಗಿ ಕಾಯುತ್ತಿರುವಾಗ, ಅವರ ಕೈ ಹಿಡಿಯಲು ನಮಗೆ ಸಮಯವಿಲ್ಲದಿದ್ದರೆ, ನಾವು ಸಂಪಾದಿಸಿದ ಹಣಕ್ಕೆ ಏನು ಬೆಲೆ ಇದೆ?
ತಂದೆ-ತಾಯಿಯ ಸೇವೆಯನ್ನು ಹೊರೆ ಎಂದು ಅಂದುಕೊಳ್ಳಬಾರದು. ಅವರ ಪಾದಗಳ ಅಡಿಯಲ್ಲೇ ಎಷ್ಟೋ ದೇವಾಲಯಗಳ ಪುಣ್ಯ ಇದೆ. ಅವರ ಆಶೀರ್ವಾದದಲ್ಲಿ ದೈವಿಕ ಶಕ್ತಿ ಇದೆ. ಅವರ ಮುಖದಲ್ಲಿ ಕಾಣುವ ನಗು ನಮ್ಮ ಜೀವನಕ್ಕೆ ಸಿಗುವ ದೊಡ್ಡ ವರ. ಆದ್ದರಿಂದ ದೇವರ ದರ್ಶನಕ್ಕೆ ಹೋಗುವ ಮುನ್ನ ಮನೆಯಲ್ಲಿರುವ ತಂದೆ-ತಾಯಿಯನ್ನು ಪ್ರೀತಿಯಿಂದ ಮಾತನಾಡಿಸಬೇಕು. ದೇವರಿಗೆ ಹೂವು ಕೊಡುವ ಮುನ್ನ ತಂದೆ-ತಾಯಿಯ ಪಾದಗಳಿಗೆ ನಮಸ್ಕರಿಸಬೇಕು. ಏಕೆಂದರೆ ನಮಗೆ ಜನ್ಮ ನೀಡಿದವರನ್ನು ಗೌರವಿಸುವುದೇ ದೊಡ್ಡ ಪೂಜೆ.
ಆದರೆ ಜೀವನದಲ್ಲಿ ಯಾವುದೋ ಒಂದು ಹಂತದಲ್ಲಿ ತಂದೆ-ತಾಯಿ ದಾರಿ ತೋರಿಸಿದಂತೆ, ನಮ್ಮ ಮನಸ್ಸಿಗೆ ಸರಿಯಾದ ದಾರಿ ತೋರಿಸಲು ಒಬ್ಬ ಸದ್ಗುರುವಿನ ಅಗತ್ಯವಿರುತ್ತದೆ. ಹೊರಗಿನ ಕತ್ತಲೆಯನ್ನು ಸೂರ್ಯ ಓಡಿಸುತ್ತಾನೆ; ಆದರೆ ನಮ್ಮಲ್ಲಿರುವ ಅಜ್ಞಾನವನ್ನು ಓಡಿಸುವವನೇ ನಿಜವಾದ ಗುರು. ಗುರು ನಮಗಾಗಿ ನಡೆಯುವುದಿಲ್ಲ; ನಾವು ನಡೆಯಬೇಕಾದ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ. ನಮ್ಮಲ್ಲಿರುವ ಅಹಂಕಾರವನ್ನು ಕರಗಿಸುತ್ತಾನೆ. ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಎಚ್ಚರಿಸುತ್ತಾನೆ. ನಾವು ಯಾರು, ಹೇಗೆ ಬಾಳಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಅದಕ್ಕೇ ಸದ್ಗುರು ಸಿಕ್ಕಿದ ಜೀವನ ಧನ್ಯ. ಗುರುವಿನ ಮಾತು ಮನಸ್ಸಿನಲ್ಲಿ ನಿಂತ ಜೀವನ ಪಾವನ.
ಈ ಇಂದಿನ ಓಟದ ಜೀವನದಲ್ಲಿ ಮನುಷ್ಯ ಶರೀರಕ್ಕೆ ವಿಶ್ರಾಂತಿ ಕೊಡುವುದನ್ನು ಕಲಿತಿದ್ದಾನೆ, ಆದರೆ ಮನಸ್ಸಿಗೆ ವಿಶ್ರಾಂತಿ ಕೊಡುವುದನ್ನು ಮರೆತಿದ್ದಾನೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಣಕ್ಕಾಗಿ ಓಟ, ಹೆಸರಿಗಾಗಿ ಓಟ, ಭವಿಷ್ಯದ ಚಿಂತೆ… ಕೊನೆಗೆ ಹಾಸಿಗೆಯ ಮೇಲೆ ಮಲಗಿದರೂ ಮನಸ್ಸು ಮಾತ್ರ ಓಡುತ್ತಲೇ ಇರುತ್ತದೆ. ಆ ಓಟವನ್ನು ತಡೆಯುವುದು ದೇವರ ನಾಮಸ್ಮರಣೆ. ಬೆಳಿಗ್ಗೆ ಶಾಂತವಾಗಿ ಕೊಂಚ ಹೊತ್ತು ಕಣ್ಣು ಮುಚ್ಚಿ ದೇವರನ್ನು ನೆನೆದಾಗ, ಮನಸ್ಸಿನ ಗೊಂದಲಗಳು ಶಮನವಾಗುತ್ತವೆ. “ನನ್ನನ್ನು ನಡೆಸುತ್ತಿರುವುದು ನನ್ನ ಶಕ್ತಿಯಲ್ಲ, ನಿನ್ನ ಕೃಪೆ” ಎಂದು ದೇವರ ಮುಂದೆ ತಲೆಬಾಗಿದಾಗ ಮನಸ್ಸಿನಲ್ಲಿ ಹೊಸ ಬೆಳಕು ಮೂಡುತ್ತದೆ.
ಒಳ್ಳೆಯ ಮಾತುಗಳನ್ನು ಕೇಳಬೇಕು, ಸತ್ಸಂಗದಲ್ಲಿ ಕುಳಿತುಕೊಳ್ಳಬೇಕು, ಗುರುವಿನ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಕಿವಿಗೆ ಬಿದ್ದ ಒಳ್ಳೆಯ ಮಾತು ಮನಸ್ಸಿಗೆ ತಲುಪಿದರೆ ಅದು ಸಂಸ್ಕಾರವಾಗುತ್ತದೆ. ಸಂಸ್ಕಾರ ನಡೆವಳಿಕೆಗೆ ಬಂದರೆ ಧರ್ಮವಾಗುತ್ತದೆ. ಧರ್ಮವೇ ಜೀವನವಾದರೆ ಆ ಜೀವನಕ್ಕೊಂದು ಅರ್ಥ ಸಿಗುತ್ತದೆ.
ಅಂತಹ ಧರ್ಮದ ದಾರಿಯಲ್ಲಿ ಬಾಳುವಾಗ ಜಾತಿ, ಧರ್ಮ, ಹಣ, ಅಧಿಕಾರ ಎಂಬ ಭೇದಭಾವಗಳಿಗೆ ಜಾಗವಿರುವುದಿಲ್ಲ. ಮನುಷ್ಯ ಹುಟ್ಟುವಾಗ ಜಾತಿಯನ್ನು ತರಲಿಲ್ಲ, ಸಾಯುವಾಗಲೂ ಜಾತಿ ಜೊತೆಗೆ ಬರುವುದಿಲ್ಲ. ಹಾಗಿರುವಾಗ ಮಧ್ಯದಲ್ಲಿ ಏಕೆ ಈ ಜಗಳಗಳು? “ಜಾತಿ, ಜಾತಿ” ಎಂದು ಕಿತ್ತಾಡಬೇಡಿ. ಮಾನವರೆಲ್ಲರೂ ಒಂದೇ. ರಕ್ತ ಎಲ್ಲರದ್ದೂ ಒಂದೇ, ಕಣ್ಣೀರು ಎಲ್ಲರದ್ದೂ ಒಂದೇ, ಹಸಿವು ಎಲ್ಲರಿಗೂ ಒಂದೇ, ಸಾವು ಎಲ್ಲರಿಗೂ ಒಂದೇ.
ಅದಕ್ಕಾಗಿ ಮನುಷ್ಯನನ್ನು ಜಾತಿಯಿಂದ ನೋಡಬೇಡಿ, ಅವರ ಒಳ್ಳೆಯ ಗುಣದಿಂದ ನೋಡಿ. ಸಂಪತ್ತಿನಿಂದ ಗೌರವಿಸಬೇಡಿ, ಸಂಸ್ಕಾರದಿಂದ ಗೌರವಿಸಿ. ಒಬ್ಬರ ನೋವನ್ನು ಇನ್ನೊಬ್ಬರು ಅರ್ಥಮಾಡಿಕೊಂಡಾಗ ಅಲ್ಲೇ ಮಾನವೀಯತೆ ಹುಟ್ಟುತ್ತದೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸಿದಾಗ ಅಲ್ಲೇ ನಿಜವಾದ ಧರ್ಮ ಹುಟ್ಟುತ್ತದೆ. ಒಬ್ಬರ ಹಸಿವನ್ನು ನೀಗಿಸಿದಾಗ ಅಲ್ಲೇ ದೇವರ ಸೇವೆ ನಡೆಯುತ್ತದೆ.
ಮೂಢನಂಬಿಕೆಗಳಿಂದ ದೂರವಿದ್ದು ಧರ್ಮದ ನಿಜವಾದ ಅರ್ಥವನ್ನು ತಿಳಿದುಕೊಳ್ಳಬೇಕು. ಭಕ್ತಿ ಎಂದರೆ ಭಯವಲ್ಲ, ಭಕ್ತಿ ಎಂದರೆ ಪ್ರೀತಿ. ದೇವರನ್ನು ಕೇವಲ ಕಷ್ಟ ಬಂದಾಗ ಮಾತ್ರ ನೆನೆಯಬಾರದು. ಸುಖದಲ್ಲಿದ್ದಾಗಲೂ ಕೃತಜ್ಞತೆಯಿಂದ ನೆನೆಯಬೇಕು. ಕಷ್ಟ ಬಂದಾಗ “ದೇವರೇ” ಎನ್ನಬೇಕು, ಆನಂದ ಬಂದಾಗ “ಧನ್ಯವಾದಗಳು ದೇವರೇ” ಎನ್ನಬೇಕು. ಆಗ ನಮ್ಮ ಜೀವನವೇ ಪ್ರಾರ್ಥನೆಯಾಗುತ್ತದೆ.
ಈ ಶ್ರಾವಣ ಮಾಸದಲ್ಲಿ ನಾವೊಂದು ಸಂಕಲ್ಪ ಮಾಡೋಣ. ನಮ್ಮ ಮನೆಯಲ್ಲಿ ಒಂದು ದೀಪ ಹಚ್ಚೋಣ… ಆದರೆ ಅದು ಕೇವಲ ಎಣ್ಣೆಯಿಂದ ಉರಿಯುವ ದೀಪವಾಗಬಾರದು. ಭಕ್ತಿ, ಧರ್ಮ, ಸಂಸ್ಕಾರ, ಗುರುಭಕ್ತಿ ಮತ್ತು ಪ್ರೀತಿಯಿಂದ ಉರಿಯುವ ದೀಪವಾಗಬೇಕು.
ನಮ್ಮ ಮಕ್ಕಳ ಮನಸ್ಸಿನಲ್ಲಿ ಆ ದೀಪವನ್ನು ಹಚ್ಚೋಣ. ಅವರಿಗೆ ಆಸ್ತಿಯನ್ನು ಮಾತ್ರ ನೀಡದೆ, ಆ ಆಸ್ತಿಯನ್ನು ಸರಿಯಾಗಿ ಬಳಸುವ ಬುದ್ಧಿಯನ್ನು ನೀಡಬೇಕು. ಹಣವನ್ನು ಮಾತ್ರ ನೀಡದೆ, ಒಳ್ಳೆಯ ಹೃದಯವನ್ನು ನೀಡಬೇಕು. ಮನೆಗಳನ್ನು ಕಟ್ಟಿಕೊಡುವುದರ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಬೇಕು. ಶಿಕ್ಷಣ ನೀಡುವ ಜೊತೆಗೆ ಅದರ ಮೌಲ್ಯವನ್ನು ಕಲಿಸಬೇಕು.
ಏಕೆಂದರೆ ಒಬ್ಬ ಸಂಸ್ಕಾರವಿರುವ ಮಗು ತಂದೆ-ತಾಯಿಗೆ ನಿಜವಾದ ಆಸ್ತಿ. ಒಂದು ಒಳ್ಳೆಯ ಕುಟುಂಬ ಸಮಾಜಕ್ಕೆ ನಿಜವಾದ ಸಂಪತ್ತು. ಪ್ರೀತಿಯಿಂದ ತುಂಬಿದ ಮನೆ ನಿಜವಾದ ದೇವಸ್ಥಾನ.
ಈ ಶ್ರಾವಣದ ಮಳೆಹನಿಗಳು ನಮ್ಮ ಮನೆಯ ಮೇಲ್ಛಾವಣಿಯನ್ನು ಮಾತ್ರವಲ್ಲ, ನಮ್ಮ ಮನಸ್ಸನ್ನೂ ತೊಳೆಯಬೇಕು. ಆ ಹನಿಗಳಿಂದ ನಮ್ಮ ಅಹಂಕಾರ, ಕೋಪ, ದ್ವೇಷ ಕರಗಿಹೋಗಬೇಕು. ನಮ್ಮ ಮನಸ್ಸಿನಲ್ಲಿ ಭಕ್ತಿ ಮೂಡಬೇಕು. ಮನೆಯಲ್ಲಿ ಸಂಸ್ಕಾರ ಬೆಳೆಯಬೇಕು. ಕುಟುಂಬದಲ್ಲಿ ಪ್ರೀತಿ ಇರಬೇಕು.
ಒಂದು ಮನೆಯಲ್ಲಿ ಬೆಳಗಿದ ಸಂಸ್ಕಾರದ ದೀಪ ಒಂದು ಕುಟುಂಬವನ್ನು ಬೆಳಗಿಸುತ್ತದೆ. ಒಂದು ಕುಟುಂಬದ ಧರ್ಮದ ದೀಪ ಇಡೀ ಸಮಾಜವನ್ನು ಬೆಳಗಿಸುತ್ತದೆ. ಸಮಾಜದಲ್ಲಿ ಬೆಳಗಿದ ಮಾನವೀಯತೆಯ ದೀಪ ಪ್ರಪಂಚವನ್ನೇ ಬೆಳಗಬಲ್ಲದು.
ಅದಕ್ಕಾಗಿ ಮಕ್ಕಳಿಗೆ ಆಸ್ತಿ ಕೊಡಿ… ಆದರೆ ಅದಕ್ಕಿಂತ ಮುಂಚೆ ಸಂಸ್ಕಾರ ಕೊಡಿ. ಶಿಕ್ಷಣ ಕೊಡಿ… ಆದರೆ ಅದಕ್ಕಿಂತ ಮುಂಚೆ ಒಳ್ಳೆಯ ಬುದ್ಧಿ ಕೊಡಿ. ಸೌಕರ್ಯ ಕೊಡಿ… ಆದರೆ ಅದಕ್ಕಿಂತ ಮುಂಚೆ ಒಳ್ಳೆಯ ನಡೆವಳಿಕೆ ಕಲಿಸಿ.
ಆಸ್ತಿ ಹಂಚಿಹೋಗುತ್ತದೆ… ಆದರೆ ಸಂಸ್ಕಾರ ತಲೆಮಾರುಗಳನ್ನು ಬೆಳೆಸುತ್ತದೆ.
ಹಣ ಮನೆಯನ್ನು ತುಂಬಿಸುತ್ತದೆ… ಆದರೆ ಸಂಸ್ಕಾರ ವಂಶದ ಹೆಸರನ್ನು ಉಳಿಸುತ್ತದೆ.
ಗುರುವಿನ ಕೃಪೆ ಜೀವನವನ್ನು ಬದಲಾಯಿಸುತ್ತದೆ… ಗುರು ತೋರಿದ ದಾರಿ ಎಲ್ಲರಿಗೂ ಬೆಳಕಾಗುತ್ತದೆ.
ಈ ಪವಿತ್ರ ಶ್ರಾವಣ ಮಾಸದಲ್ಲಿ ಪ್ರತಿ ಮನೆಯಲ್ಲೂ ಭಕ್ತಿ ಬೆಳಗಲಿ, ಪ್ರತಿ ಮನಸ್ಸಿನಲ್ಲೂ ಪ್ರೀತಿ ತುಂಬಲಿ, ಪ್ರತಿ ಕುಟುಂಬದಲ್ಲೂ ಸಂಸ್ಕಾರ ಬೆಳೆಯಲಿ, ಪ್ರತಿ ಮಗುವೂ ಒಳ್ಳೆಯ ಗುಣದೊಂದಿಗೆ ಬೆಳೆಯಲಿ, ಪ್ರತಿ ತಂದೆ-ತಾಯಿಗೂ ಮಕ್ಕಳ ಪ್ರೀತಿ-ಸೇವೆ ಸಿಗಲಿ, ಎಲ್ಲರೂ ಒಳ್ಳೆಯ ದಾರಿಯಲ್ಲಿ ನಡೆಯಲಿ.
ಶ್ರಾವಣದ ಪವಿತ್ರ ಮಳೆಹನಿಗಳು ನಮ್ಮ ಮನಸ್ಸನ್ನು, ಮಾತನ್ನು, ಕೆಲಸವನ್ನು ಮತ್ತು ಜೀವನವನ್ನು ಪವಿತ್ರಗೊಳಿಸಲಿ.
ನಮ್ಮ ಮನಸ್ಸೇ ಒಂದು ದೇವಸ್ಥಾನವಾಗಲಿ.
ನಮ್ಮ ಮಾತೇ ಒಂದು ಮಂತ್ರವಾಗಲಿ.
ನಮ್ಮ ಕೈಗಳು ಸೇವೆಗೆ ಬಳಸಲ್ಪಡಲಿ.
ನಮ್ಮ ಜೀವನವೇ ದೇವರಿಗೆ ಅರ್ಪಣೆಯಾಗಲಿ.
ಗುರುವಿನ ಕೃಪೆ, ದೇವರ ಅನುಗ್ರಹ ಮತ್ತು ತಂದೆ-ತಾಯಂದಿರ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಒಳ್ಳೆಯ ಕೆಲಸ ಮಾಡುವ ಶಕ್ತಿ ನಮಗೆ ಸಿಗಲಿ..
ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು
ಮಲ್ಲಯ್ಯ ಗಿರಿ ದೇಗಲಮಡಿ ಮತ್ತು ಬಸವಕಲ್ಯಾಣ
