ಬೆಂಗಳೂರು:
ಮಾನ್ಯ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರು ಹಾಜರಾಗಿದ್ದ ಆರೋಪಿಯೋರ್ವನನ್ನು ಬೆಂಗಳೂರು ನಗರ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಲಭಿಸಿದ ಖಚಿತ ಮಾಹಿತಿ ಮೇರೆಗೆ ದಿನಾಂಕ 19/08/2026 ರಂದು ಸಿಸಿಬಿಯ ಸಂಘಟಿತ ಅಪರಾಧ ದಳ, ಪಶ್ಚಿಮ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಯ ತಂಡವು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಬೆಂಗಳೂರು ನಗರ ನೈರುತ್ಯ ವಿಭಾಗದ ಪ್ರಮುಖ ರೌಡಿ ವ್ಯಕ್ತಿಯ ಸಹಚರನಾಗಿರುವ ಮಂಜುನಾಥ @ ಧಮ್ಮಿ ಮಂಜ, ವಯಸ್ಸು 28 ವರ್ಷ, ಎಂಬಾತನನ್ನು ವಶಕ್ಕೆ ಪಡೆಯಲಾಯಿತು.
ಆರೋಪಿಯ ಹಿನ್ನೆಲೆ:
ವಶಕ್ಕೆ ಪಡೆದ ಮಂಜುನಾಥನ ವಿರುದ್ಧ 2017ನೇ ಸಾಲಿನಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಒಟ್ಟು 3 ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಮತ್ತು ಉದ್ಯೋಷಣೆ ಹೊರಡಿಸಲಾಗಿತ್ತು. ಅಲ್ಲದೆ 2024ನೇ ಸಾಲಿನ ಕುಂಬಳಗೋಡು ಪೊಲೀಸ್ ಠಾಣೆಯ ಪ್ರಮುಖ ಪ್ರಕರಣದಲ್ಲೂ ಈತ ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ.
ವಶಕ್ಕೆ ಪಡೆದ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಕುಂಬಳಗೋಡು ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆ ತಂಡ:
ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರು, ಅಪರಾಧಗಳು, ಬೆಂಗಳೂರು ನಗರ ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ-1 ರವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಸಿಬಿ ಸಂಘಟಿತ ಅಪರಾಧ ದಳ, ಪಶ್ಚಿಮ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದರು.
ವರದಿ : ಮುಬಾರಕ್ ಎಸ್
