ಭಾಲ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಭಾಲ್ಕಿ ತಾಲೂಕು ಸೇರಿಸದಿರುವುದು ಭಾಲ್ಕಿ ತಾಲೂಕಿನ ರೈತರಿಗೆ ಮಾಡಿರುವ ಅನ್ಯಾಯವಾಗಿದೆ.

ಭಾಲ್ಕಿ ತಾಲೂಕಿನ ರೈತರು ಈಗಾಗಲೇ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರ ಮೇಲೆ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ನಡೆದುಕೊಂಡು ತಾಲೂಕಿನ ರೈತರಿಗೆ ಮತ್ತೊಂದು ಅನ್ಯಾಯ ಮಾಡಿದೆ.

ಪ್ರಸಕ್ತ ವರ್ಷ ನಮ್ಮ ಭಾಗದಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಸಕಾಲದಲ್ಲಿ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿ, ಬೀಜ, ರಸಗೊಬ್ಬರ ಹಾಗೂ ಬೆಳೆಗಳ ಕಸ ತೆಗೆಯಲು ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆಯ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ತಾಲೂಕಿನ ಬ್ಯಾರೇಜ್‌ಗಳು, ಬಾವಿಗಳು, ಬೋರ್‌ವೆಲ್‌ಗಳು ಹಾಗೂ ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ. ರೈತರು ಹಾಗೂ ಕೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ಬೇರೆ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದ್ದು, ಬೆಳೆ ನಷ್ಟದ ಅಂದಾಜು ವರದಿಯೂ ಸಿದ್ಧವಾಗಿದೆ. ಆದ್ದರಿಂದ ಭಾಲ್ಕಿ ತಾಲೂಕನ್ನು ಅಧಿಕೃತವಾಗಿ ‘ಬರಗಾಲ ಪೀಡಿತ ತಾಲೂಕು’ ಎಂದು ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದರ ಮೂಲಕ ಬಾಧಿತ ರೈತರಿಗೆ ಸೂಕ್ತ ಬೆಳೆ ಪರಿಹಾರ ವಿತರಿಸುವುದು, ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯುವಂತೆ ಕ್ರಮ ಕೈಗೊಳ್ಳಬೇಕು.

ತಾಲೂಕಿನ ಶಾಸಕರೇ ಸಚಿವರಾಗಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರೂ ಇದ್ದಾರೆ ಹಾಗೂ ಅವರ ಪುತ್ರ ಸಂಸದರಾಗಿದ್ದಾರೆ. ಇಷ್ಟೆಲ್ಲಾ ಜನಪ್ರತಿನಿಧಿಗಳು ಇದ್ದರೂ ಭಾಲ್ಕಿ ತಾಲೂಕಿನ ರೈತರು ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.

ಆದ್ದರಿಂದ ಒಂದು ವಾರದೊಳಗಾಗಿ ಭಾಲ್ಕಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿ, ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಹಿತಕ್ಕಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ.

error: Content is protected !!