38 ವರ್ಷಗಳ ಸೇವೆಗೆ ಭಾವುಕ ಬೀಳ್ಕೊಡುಗೆ ಅಂಗನವಾಡಿ ಶಿಕ್ಷಕಿ ಸುವರ್ಣಾ ಚೌಗಲಾ ನಿವೃತ್ತಿ

ಗೌಡವಾಡ: ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳೆದ 38 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸಿ, ನೂರಾರು ಮಕ್ಕಳ ಬಾಳಿಗೆ ಅಕ್ಷರ ಜ್ಞಾನ ಹಾಗೂ ಸಂಸ್ಕಾರದ ಬೆಳಕು ನೀಡಿದ ಶಿಕ್ಷಕಿ ಶ್ರೀಮತಿ ಸುವರ್ಣಾ ಶಿವರಾಯಿ ಚೌಗಲಾ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾವುಕ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕಿಯರು, ಗ್ರಾಮದ ಹಿರಿಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಹಾಗೂ ಮಕ್ಕಳು ಭಾಗವಹಿಸಿ ಸುವರ್ಣಾ ಚೌಗಲಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅವರ ದೀರ್ಘಕಾಲದ ಸೇವೆಯನ್ನು ಸ್ಮರಿಸಿದರು.

ಸುಮಾರು ನಾಲ್ಕು ದಶಕಗಳ ಕಾಲ ಮಕ್ಕಳೊಂದಿಗೆ ಬೆರೆತು, ಅವರಿಗೆ ಅಕ್ಷರ ಜ್ಞಾನ ಮಾತ್ರವಲ್ಲದೆ ಪ್ರೀತಿ, ಕಾಳಜಿ ಮತ್ತು ಉತ್ತಮ ಸಂಸ್ಕಾರವನ್ನು ನೀಡಿದ ಅವರ ಸೇವೆ ಶ್ಲಾಘನೀಯವಾಗಿದೆ. ಮಕ್ಕಳ ಮೇಲಿನ ಅಪಾರ ಪ್ರೀತಿ ಹಾಗೂ ದಣಿವರಿಯದ ಸೇವಾ ಮನೋಭಾವ ಇತರರಿಗೆ ಮಾದರಿಯಾಗಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ಮುಖ್ಯಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುವರ್ಣಾ ಚೌಗಲಾ ಅವರ ಸೇವೆಯನ್ನು ಸ್ಮರಿಸಿ ‘ಮಕ್ಕಳ ನಗುವಿನ ಅಕ್ಷರ ದೇವತೆ’ ಎಂಬ ಭಾವನಾತ್ಮಕ ಕವನದ ಮೂಲಕ ಗೌರವ ಸಲ್ಲಿಸಲಾಯಿತು.

«ಮೂವತ್ತೆಂಟು ವರುಷಗಳ ಕಾಲ,
ಮಕ್ಕಳ ಪ್ರೀತಿಯಲ್ಲಿ ಬೆಳೆದ ಬಾಳ!
ಗೌಡವಾಡದ ಶಾಲೆಯಂಗಳದಿ,
ಬೆಳಗಿದಿರಿ ದೀಪವನು ಪ್ರತಿಯೊಬ್ಬರ ಮನದಿ.

ಅಂಗನವಾಡಿಯ ಕಂದಮ್ಮಗಳ ಕೈಹಿಡಿದು,
ಜ್ಞಾನದ ಅಕ್ಷರವ ಹಂಚಿದಿರಿ ನಡೆದು.
ತಾಯಿಯಂತೆ ಪ್ರೀತಿಯನು ಧಾರೆಯೆರೆದು,
ಸಂಸ್ಕಾರದ ಪಾಠವನು ಹೇಳಿದಿರಿ ಮೆರೆದು.»

ಸುವರ್ಣಾ ಚೌಗಲಾ ಅವರ ನಿವೃತ್ತಿ ಜೀವನವು ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಕುಟುಂಬದವರೊಂದಿಗೆ ಸಂತೋಷದಿಂದ ಕೂಡಿರಲಿ. ಮುಂದಿನ ಜೀವನದ ಪಯಣ ಹೂವಿನಂತೆ ಸುಂದರವಾಗಿರಲಿ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ ಹೃತ್ಪೂರ್ವಕವಾಗಿ ಶುಭ ಹಾರೈಸಿದರು.

error: Content is protected !!