ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಶಾಸಕ ಅಶೋಕ್ ಪಟ್ಟಣ
ರಾಮದುರ್ಗ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಬೆಳಗಾವಿ ಮತ್ತು ತಾಲೂಕು ಆಡಳಿತ ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಚೇತನ ಶಾಲೆಯ ಆವರಣದ ಗುರುಭವನದಲ್ಲಿ “ಪ್ರಜಾಸೇವಾ ಅಭಿಯಾನ”ಕ್ಕೆ ಶಾಸಕ ಅಶೋಕ್ ಪಟ್ಟಣ ಚಾಲನೆ ನೀಡಿದರು.
ನಂತರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಅವರು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಪಟ್ಟಣ, ಸಾಮಾನ್ಯ ನಾಗರಿಕರು ಹಾಗೂ ಬಡ ಜನರು ಸರ್ಕಾರದ ವಿವಿಧ ಸೇವೆಗಳನ್ನು ಪಡೆಯಲು ಮತ್ತು ಕುಂದುಕೊರತೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಜಾರಿಗೆ ತರಲಾಗಿದೆ ಎಂದರು.
ಬಡಜನರಿಗೆ ತೊಂದರೆಯಾಗದಂತೆ ಮನೆ ಬಾಗಿಲಿಗೆ ಅಥವಾ ಹತ್ತಿರದ ಕೇಂದ್ರಗಳಲ್ಲೇ ಸರ್ಕಾರಿ ಸೇವೆಗಳು ದೊರೆಯುವಂತೆ ಸರಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಹಾಗೂ ದೂರುಗಳು ಆರೋಗ್ಯ, ಶಿಕ್ಷಣ, ಕಂದಾಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಕ್ಷಣ ತಲುಪಿ, ನಿಗದಿತ ಅವಧಿಯೊಳಗೆ ಪರಿಹಾರ ದೊರೆಯುವಂತೆ ನೋಡಲ್ ಅಧಿಕಾರಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಸೇವಾ ಅಭಿಯಾನದ ಉದ್ದೇಶ ಹಾಗೂ ಸಾರ್ವಜನಿಕರಿಗೆ ದೊರೆಯುವ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು.
ಅರ್ಜಿಗಳನ್ನು ಸ್ವೀಕರಿಸಲು 10 ಕೌಂಟರ್ಗಳನ್ನು ತೆರೆಯಲಾಗಿದ್ದು, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಕಂಪ್ಯೂಟರ್ ಆಪರೇಟರ್ಗಳು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಇಜಾನ್ ಸುಬೂರ್, ಸಿಪಿಐ ವಿನಾಯಕ್ ಬಡಿಗೇರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಬಿ. ರಂಗನ್ ಗೌಡ್ರು, ಇಂದಿರಾ ಕ್ಯಾಂಟೀನ್ ರಾಜ್ಯ ಸದಸ್ಯ ಪಿರು ತಳವಾರ್, ಸತೀಶ್ ಜಿನಗಾ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
