ಕಾಳಗಿ: ತಾಲೂಕಿನ ರಮ್ಮನಗೂಡ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಮಾತಾ ಶ್ರೀಕಾಲಭೈರವಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಏಕನಾಥ ಮಹಾರಾಜರು ಮೌನಾನುಷ್ಠಾನ ಕೈಗೊಂಡಿದ್ದಾರೆ.
ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಏಕನಾಥ ಮಹಾರಾಜರ ಮೌನಾನುಷ್ಠಾನಕ್ಕೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆ. ಲೋಕದ ಒಳಿತಿಗಾಗಿ, ಶಾಂತಿ, ಸಮೃದ್ಧಿ ಹಾಗೂ ಸಕಲ ಜೀವಿಗಳ ಕಲ್ಯಾಣಕ್ಕಾಗಿ ಅನುಷ್ಠಾನ ನಡೆಯುತ್ತಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.
ಶ್ರೀಗಳ ಎರಡನೇ ವರ್ಷದ ಈ ಮೌನಾನುಷ್ಠಾನವು ಆಗಸ್ಟ್ 20ರಿಂದ ಪ್ರಾರಂಭವಾಗಿದ್ದು ನಾಳೆ 9/09/2026ರಂದು ಬುಧವಾರ ಮುಕ್ತಾಯವಾಗಲಿದೆ. ನಾಳೆ ಬೆಳಗ್ಗೆ 4ರಿಂದಲೇ ಕಾಲಭೈರವಿ ದೇವಿ ಹಾಗೂ ರಾಮರಾವ ಮಹಾರಾಜರಿಗೆ ವಿಶೇಷ ಪೂಜೆ ನಡೆಯಲಿದೆ. ರುಮ್ಮನಗೂಡ ಸೇವಾಲಾಲ್ ಚೌಕ್ ನಿಂದ ಕುಂಭ-ಕಳಶಗಳ ಮೆರವಣಿಗೆ ಮೂಲಕ ಕಾಲಭೈರವಿ ದೇವಸ್ಥಾನ ತಲುಪಿ ಪಂಚಾಮೃತ ಅಭಿಷೇಕ ನಡೆಯುವುದು.
ಸಮಾರಂಭಕ್ಕೆ ಬೀದರ್ ಗೋವಿಂದ ಮಹಾರಾಜರು, ಮುಗಳನಾಗಾವಿಯ ಜೇಮಸಿಂಗ್ ಮಹಾರಾಜರು, ಪರವತಲಿಂಗ ಪರಮೇಶ್ವರ ಮಹಾರಾಜರು, ಕೊರವಿಯ ವಿಠಲ ಮಹಾರಾಜ, ದುಬೈನ ಮುನಿಸ್ತಂದ್ರ ಮಹಾರಾಜ, ಬೆಂಗಳೂರಿನ ಬಿ.ಎಂ.ಪಾಟೀಲ, ಶಾಸಕ ಡಾ.ಅವಿನಾಶ ಜಾಧವ, ಮಾಜಿ ಸಂಸದ ಉಮೇಶ ಜಾಧವ, ಭಾಲ್ಕಿ, ಬೀದರ್, ಕಲಬುರಗಿ, ಮಲಖೇಡ, ಶಾದಿಪೂರ, ಮುಂಬೈ, ಸಾಸರಗಾಂವ, ಘೋಷಾ, ಚಿಮ್ಮಚೋಡ್, ಚಂದನಕೆರಿ, ಕಮಲಾಪೂರ, ಭುಯ್ಯಾರ, ಅರಣಕಲ್, ರಟಕಲ್ ಕೋಳ್ಡಿ ಸೇರಿ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಲಿದ್ದಾರೆ ಎಂದು ದೇವಸ್ಥಾನ ಬಳಗ ತಿಳಿಸಿದೆ.
