ಗುಡಸ ಗ್ರಾಮದ 98ನೇ ಅಂಗನವಾಡಿ ವಿವಾದಕ್ಕೆ ಹೊಸ ತಿರುವು – 97ನೇ ಅಂಗನವಾಡಿ ಕಾರ್ಯಕರ್ತೆಯ ಮಧ್ಯಪ್ರವೇಶಕ್ಕೆ ಗ್ರಾಮಸ್ಥರ ತರಾಟೆ

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ 98ನೇ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಅವ್ಯವಸ್ಥೆಯ ಕುರಿತು ಗ್ರಾಮಸ್ಥರು ತೀವ್ರ ಆರೋಪ ಮಾಡಿದ್ದಾರೆ.

98ನೇ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕವಿತಾ ಮಾಳಕರಿ ಅವರು ಸರ್ಕಾರ ನೀಡಿರುವ ಮೊಬೈಲ್ ದುರುಪಯೋಗ ಮಾಡುತ್ತಿದ್ದಾರೆ, ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಮೊಟ್ಟೆಯನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆದರೆ ಈ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಸಾರ್ವಜನಿಕರು 98ನೇ ಅಂಗನವಾಡಿ ಕಾರ್ಯಕರ್ತೆಯನ್ನು ಪ್ರಶ್ನಿಸುತ್ತಿದ್ದ ವೇಳೆ, 97ನೇ ಅಂಗನವಾಡಿ ಕೇಂದ್ರದ (ರಾಜಾಪುರಿ) ಕಾರ್ಯಕರ್ತೆಯೊಬ್ಬರು ಮಧ್ಯಪ್ರವೇಶಿಸಿ ಅವರ ಪರವಾಗಿ ಉತ್ತರಿಸಲು ಆರಂಭಿಸಿದ್ದಾರೆ. ಇದನ್ನು ಕಂಡು ಗ್ರಾಮಸ್ಥರು ಇನ್ನಷ್ಟು ಅಸಮಾಧಾನಗೊಂಡಿದ್ದಾರೆ.

ಸಾರ್ವಜನಿಕರು 97ನೇ ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡು, “ನಿಮ್ಮ ಅಂಗನವಾಡಿಯಲ್ಲಿ ಎಷ್ಟು ಮಕ್ಕಳಿದ್ದಾರೆ? ನೀವು ಇಲ್ಲಿ ಏಕೆ ಬಂದಿದ್ದೀರಿ? 98ನೇ ಅಂಗನವಾಡಿಯಲ್ಲಿ ಯಾರು ಕೆಲಸ ಮಾಡಬೇಕು?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪತ್ರಕರ್ತರೊಬ್ಬರು ವಿಡಿಯೋ ಮಾಡುತ್ತಿದ್ದಾಗ, 97ನೇ ಅಂಗನವಾಡಿ ಕಾರ್ಯಕರ್ತೆಯೂ ಸಹ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಪತ್ರಕರ್ತರ ವಿಡಿಯೋಗೆ ಪ್ರತಿಯಾಗಿ ವಿಡಿಯೋ ಮಾಡುವ ಮೂಲಕ ಬೆದರಿಸುವ ಯತ್ನ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

98ನೇ ಅಂಗನವಾಡಿ ಕಾರ್ಯಕರ್ತೆ ಪರವಾಗಿ 97ನೇ ಕಾರ್ಯಕರ್ತೆ ಉತ್ತರಿಸುತ್ತಿರುವುದು ನಿಯಮಬಾಹಿರವಾಗಿದ್ದು, ಈ ಕುರಿತು ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗುಡಸ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!