ಬಸವಕಲ್ಯಾಣ : ತಾಲೂಕಿನ ಉಪ ವಿಭಾಗೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಭೂಮಿ ಪೂಜೆ (ಶಂಕುಸ್ಥಾಪನೆ) ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಹಾಗೂ ಶಿಷ್ಟಾಚಾರ ನಿಯಮ ಪಾಲನೆಯಲ್ಲಿ ವಿಫಲರಾದ ಆರೋಪದ ಮೇಲೆ ಇಬ್ಬರು ಆರೋಗ್ಯ ಅಧಿಕಾರಿಗಳನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಡಾ. ಧ್ಯಾನೇಶ್ವರ ನೀರಗುಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಬೀದರ್ ಜಿಲ್ಲೆ
ಡಾ. ಅಶೋಕ ಮ್ಯಾಲಾರೆ ತಾಲೂಕಾ ಆರೋಗ್ಯಾಧಿಕಾರಿಗಳು, ಬಸವಕಲ್ಯಾಣ ಅಮಾನತ್ತುಗೊಂಡ ಅಧಿಕಾರಿಗಳಾಗಿದ್ದಾರೆ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಿಂದ ಹೊರಡಿಸಲಾದ ಆದೇಶ ಸಂಖ್ಯೆ HFWS/312/2026-MOS (E-2302349) ದಿನಾಂಕ 17.09.2026* ರ ಪ್ರಕಾರ,
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಆರೋಗ್ಯ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ PM-ABHIM ಯೋಜನೆ ಅಡಿ ಬಸವಕಲ್ಯಾಣ ಉಪ ವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಸಮಾರಂಭ ದಿನಾಂಕ 16.09.2026 ರಂದು ನಡೆದಿತ್ತು. ಈ ಸಮಾರಂಭದ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗೂ ಶಿಷ್ಟಾಚಾರ ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021 ರ ನಿಯಮ 3(1) ರ ಉಪ ನಿಯಮ (i),(ii) ಹಾಗೂ (iii) ರಲ್ಲಿ ನಮೂದಿಸಿರುವ ನಡತೆ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತ್ತುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಗುರುದತ್ತ ಹೆಗಡೆ, ಭಾ.ಆ.ಸೇ., ಅವರು ಈ ಆದೇಶ ಹೊರಡಿಸಿದ್ದು, ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ ಡಾ. ಧ್ಯಾನೇಶ್ವರ ನೀರಗುಡೆ ಅವರ ಲೀನ್ ಅನ್ನು ಸಾರ್ವಜನಿಕ ಆಸ್ಪತ್ರೆ, ಮಾನ್ವಿ ತಾಲೂಕು, ರಾಯಚೂರು ಜಿಲ್ಲೆಗೆ ಹಾಗೂ ಡಾ. ಅಶೋಕ ಮ್ಯಾಲಾರೆ ಅವರ ಲೀನ್ ಅನ್ನು ಸಾರ್ವಜನಿಕ ಆಸ್ಪತ್ರೆ, ಅಫಜಲಪುರ, ಕಲಬುರಗಿ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
