ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ದಿಢೀರ್ ಭೇಟಿ

ಚಿಕ್ಕೋಡಿ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಆಸ್ಪತ್ರೆಯ ಔಷಧ ಮಳಿಗೆಯಲ್ಲಿ ಒಂದೇ ಕೌಂಟರ್ ನಲ್ಲಿ ಔಷಧಿ ವಿತರಣೆ, ಸೂಚನಾ ಫಲಕಗಳ ಕೊರತೆ, ಔಷಧಿ ಬಾಟಲಿಗಳ ಮೇಲೆ ದೂಳು, ಸ್ವಚ್ಛತೆಯ ಕೊರತೆ ಸೇರಿದಂತೆ ಹಲವು ಅವ್ಯವಸ್ಥೆಗಳು ಕಂಡುಬಂದವು. ಇದನ್ನು ಕಂಡು ಅಸಮಾಧಾನಗೊಂಡ ನ್ಯಾಯಮೂರ್ತಿಗಳು ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುರುಷರು, ಮಹಿಳೆಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಔಷಧಿ ವಿತರಣಾ ಕೌಂಟರ್ ವ್ಯವಸ್ಥೆ ಮಾಡುವಂತೆ, ವೈದ್ಯರು ಬರೆದುಕೊಡುವ ಎಲ್ಲಾ ಔಷಧಿಗಳನ್ನು ಕಡ್ಡಾಯವಾಗಿ ನೀಡುವಂತೆ ಹಾಗೂ ರಕ್ತ ಭಂಡಾರ, ಔಷಧ ಉಗ್ರಾಣ ಸೇರಿದಂತೆ ಎಲ್ಲಾ ವಿಭಾಗಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು. ಸರ್ಕಾರದಿಂದ ಸ್ವಚ್ಛತೆ ಮತ್ತು ನಿರ್ವಹಣೆಗೆ ಅನುದಾನ ಬರುತ್ತಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಸರಿಪಡಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ, ತಹಶೀಲ್ದಾರ್ ಆರ್.ಆರ್. ಬುರ್ಲಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!