ಗುರುವಂದನಾ ಕಾರ್ಯಕ್ರಮ ಆಯೋಜಿಸಿದ ಸಹೋದರಿಯರು

ಹುಕ್ಕೇರಿ :ಶಿಕ್ಷಕರ ದಿನಾಚರಣೆ ಎಂದರೆ ಬರಿ ಭಾಷಣ, ಶುಭಾಶಯಗಳಿಗೆ ಸೀಮಿತವಾಗುವ ಈ ದಿನಗಳಲ್ಲಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಅಕ್ಷರಶಃ ಅರ್ಥಪೂರ್ಣವಾದ ಹಾಗೂ ವಿನೂತನವಾದ ‘ಗುರುವಂದನಾ’ ಕಾರ್ಯಕ್ರಮವೊಂದು ಜರುಗಿದೆ. ತಾವು ಬೆಳೆದು ದೊಡ್ಡವರಾದ ಮೇಲೆಯೂ ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಮರೆಯದ ಸೋದರಿಯರು, ತಮಗೆ ಪಾಠ ಹೇಳಿಕೊಟ್ಟ ಶಾಲೆಗಳ ಹತ್ತಾರು ಶಿಕ್ಷಕರನ್ನು ಕರೆಸಿ ಸತ್ಕರಿಸುವ ಮೂಲಕ ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗಿದ್ದಾರೆ.

ಹುಕ್ಕೇರಿ ಪಟ್ಟಣದ ಶಾಹಿನ ಕಿಡ್ಸ್ ಶಾಲೆಯಲ್ಲಿ ಇಂದು ಅತ್ಯಂತ ಭಾವಪೂರ್ಣ ಹಾಗೂ ವಿಶೇಷವಾದ ಗುರುವಂದನಾ ಕಾರ್ಯಕ್ರಮ ನಡೆಯಿತು. ಶಾಹಿನ ಕಿಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಬ್ದುಲ್ ಕರೀಂ ಮಕಾಂದಾರ್ ಅವರ ಸುಪುತ್ರಿಯರಾದ ಡಾಕ್ಟರ್ ಸಾನಿಯಾ ಮಕಾಂದಾರ್ ಹಾಗೂ ಕುಮಾರಿ ಶಿಫಾ ಮಕಾಂದಾರ್ ಇಬ್ಬರೂ ಸೇರಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ತಾವಿಬ್ಬರೂ ಪ್ರಾಥಮಿಕ ಶಿಕ್ಷಣ ಪೂರೈಸಿದ ಹುಕ್ಕೇರಿಯ ‘ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ’, ಪ್ರೌಢ ಶಿಕ್ಷಣ ಕಲಿತ ‘ಸರ್ಕಾರಿ ಉರ್ದು ಪ್ರೌಢಶಾಲೆ’ ಹಾಗೂ ತಮಗೆ ವಿದ್ಯೆ ಧಾರೆ ಎರೆದು ಪ್ರಸ್ತುತ ನಿವೃತ್ತರಾಗಿರುವ ಸರ್ವ ಗುರು ವೃಂದವನ್ನು ವೇದಿಕೆಗೆ ಕರೆಸಿ, ಗೌರವಿಸಿ ಸತ್ಕರಿಸಲಾಯಿತು. ನಿವೃತ್ತ ಶಿಕ್ಷಕರೂ ಸೇರಿದಂತೆ ಎರಡೂ ಶಾಲೆಗಳ ಸುಮಾರು ೪೫ಕ್ಕೂ ಹೆಚ್ಚು ಶಿಕ್ಷಕರಿಗೆ ಈ ಸಂದರ್ಭದಲ್ಲಿ ಭವ್ಯ ಸನ್ಮಾನ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಬ್ದುಲ್ ಕರೀಂ ಮಕಾಂದಾರ್ ವಹಿಸಿಕೊಂಡಿದ್ದರೆ, ಮುಖ್ಯ ಅತಿಥಿಗಳಾಗಿ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕೆ. ಬಿ. ಲೋಖಂಡೆ ಆಗಮಿಸಿದ್ದರು. ಶಾಹಿನ ಕಿಡ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಇರ್ಷಾದ್ ಅಹ್ಮದ್ ಮುಲ್ಲಾ ಹಾಗೂ ಕಾರ್ಯದರ್ಶಿ ಶ್ರೀ ಸಿಕಂದರ್ ಕಲಾವಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾವು ಕಲಿಸಿದ ವಿದ್ಯಾರ್ಥಿನಿಯರು ಇಂದು ಉನ್ನತ ಮಟ್ಟಕ್ಕೇರಿ, ತಮಗೇ ಸನ್ಮಾನ ಮಾಡುತ್ತಿರುವುದನ್ನು ಕಂಡು ಶಿಕ್ಷಕರು ಭಾವುಕರಾದರು. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ, ಭವಿಷ್ಯಕ್ಕೆ ದಾರಿದೀಪವಾಗುವ ಶಿಕ್ಷಕರ ಸೇವೆಯನ್ನು ಸ್ಮರಿಸಿದ ಎಲ್ಲ ಗುರುಗಳು, ಡಾ. ಸಾನಿಯಾ ಹಾಗೂ ಶಿಫಾ ಮಕಾಂದಾರ್ ಸೋದರಿಯರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ಎಸ್. ಎಸ್. ಕರಿಗಾರ, ಬಿಲಾಲ್ ಕಾರಿಕಾಜಿ, ಶ್ರೀಮತಿ ಎಸ್. ಎಂ. ಮೋಮಿನ್, ಸಲೀಂ ಅಹಮದ್ ಕಾದ್ರೊಳ್ಳಿ, ಶ್ರೀಮತಿ ಜಹಾಂಗೀರ್, ಎಸ್. ಎಂ. ಕಮತೆ, ಹಸನ್ ಕಾಲೆಕಾಜಿ, ಸಚಿನ್ ಮೆಟಗೊಡ್ಲಿ, ಶ್ರೀಮತಿ ಶಬಾನ ಜಮಾದಾರ್, ಶ್ರೀಮತಿ ಎ. ಎಸ್. ಅಣ್ಣಿಗೇರಿ, ಶ್ರೀಮತಿ ಎಸ್. ಎನ್. ಜಮಾದಾರ್ ಸೇರಿದಂತೆ ಯು.ಜಿ.ಎಸ್. ಶಾಲೆ, ಉರ್ದು ಪ್ರೌಢಶಾಲೆ ಹಾಗೂ ಶಾಹಿನ ಕಿಡ್ಸ್ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು.

ಡಾ. ಸಾನಿಯಾ ಮಕಾಂದಾರ್ ಅವರ ಸುಲಲಿತ ನಿರೂಪಣೆ, ಶ್ರೀ ಎನ್. ಎನ್. ವಾಚ್ ಮೇಕರ್ ಅವರ ಸ್ವಾಗತ ನುಡಿ ಹಾಗೂ ಕುಮಾರಿ ಶಿಫಾ ಮಕಾಂದಾರ್ ಅವರ ವಂದನಾರ್ಪಣೆಯೊಂದಿಗೆ ಈ ಮಹತ್ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಗುರು-ಶಿಷ್ಯರ ನಡುವಿನ ಅಳಿಸಲಾಗದ ಬಂಧಕ್ಕೆ ಮೈಲಿಗಲ್ಲಾದ ಈ ಕಾರ್ಯಕ್ರಮ, ಸಮಾಜಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ಒಂದು ಅತ್ಯುತ್ತಮ ಮಾದರಿಯಾಗಿದೆ.

error: Content is protected !!