ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದಿದ್ದ ಎರಡು ನಾಯಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಮಾಶಾಳ ಗ್ರಾಮದ ಶಿವಯ್ಯ ಬಸಯ್ಯ ದಿಗ್ಸಂಗಿ ಅವರಿಗೆ ಸೇರಿದ ಸರ್ವೆ ನಂಬರ್ 17/05ರ ಹೊಲದಲ್ಲಿರುವ ಸುಮಾರು 100×100 ಅಡಿ ವಿಸ್ತೀರ್ಣದ ಕೃಷಿ ಹೊಂಡಕ್ಕೆ ಎರಡು ನಾಯಿಗಳು ಆಕಸ್ಮಿಕವಾಗಿ ಬಿದ್ದಿದ್ದವು.
ನಾಯಿಗಳು ಹೊಂಡದಿಂದ ಹೊರಬರಲಾಗದೆ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಎರಡೂ ನಾಯಿಗಳನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಫಜಲಪುರ ಅಗ್ನಿಶಾಮಕ ಸಿಬ್ಬಂದಿ ವರ್ಗ ಅಗ್ನಿ ಶಾಮಕ ಠಾಣಾಧಿಕಾರಿ ಅಶೋಕ್ ಜಮಾದಾರ,ಚಾಲಕ ಶಿವಾನಂದ ಕುಂಬಾರ, ಅಜರುದ್ದೀನ್,ಸದಾನಂದ ಸೊಪ್ಪಿ, ಮಹಾಂತೇಶ ಜಮಾದಾರ, ಶರಣು ಪ್ರಮೋದ್ ಅಕ್ಷಯ ಕುಮಾರ್ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ : ಸೈಫನ್ ಮುಲ್ಲಾ
