ಬೆಳಗಾವಿ: ಮುಖ್ಯಮಂತ್ರಿ ನೇತೃತ್ವದ ಕಬ್ಬು ಬೆಳೆಗಾರರ ಸಭೆ ಆರಂಭಕ್ಕೂ ಮುನ್ನವೇ ಸುವರ್ಣಸೌಧದ ಸಭಾಂಗಣದಲ್ಲಿ ರೈತ ಸಂಘಟನೆಗಳ ಎರಡು ಬಣಗಳ ನಡುವೆ ಜಗಳ ನಡೆದು ಗೊಂದಲ ಉಂಟಾಗಿದೆ.
ಕೋಡಿಹಳ್ಳಿ ಚಂದ್ರಶೇಖರ ಬಣ ಮತ್ತು ಯುವನ್ನ ಪೂಜಾರಿ ಬಣದ ರೈತರ ನಡುವೆ ಮಾತಿನ ಚಕಮಕಿ ನಡೆದು, ನಂತರ ಗಾಜಿನ ಗ್ಲಾಸ್ ಎಸೆದು ಗಲಾಟೆ ಮಾಡಿದ್ದಾರೆ. ಸಭೆಗೆ ಬಂದಿದ್ದ ಇತರೆ ರೈತರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು ರೈತರನ್ನು ಹೊರಗೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಬ್ಬಿನ ದರದ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆದಿದ್ದರು. ಆದರೆ ಸಭೆಗೂ ಮುನ್ನವೇ ರೈತ ಸಂಘಟನೆಗಳಲ್ಲಿನ ಭಿನ್ನಮತ ಬಯಲಾಗಿದೆ ಎಂದು ಹೇಳಲಾಗುತ್ತಿದೆ.
