ಹೈದರಾಬಾದ್ ಕರ್ನಾಟಕ ಆಯಿತು ಕಲ್ಯಾಣ ಕರ್ನಾಟಕ ಆದರೂ ಈ ಭಾಗಕ್ಕೆ ದೊರೆಯದ ಕಲ್ಯಾಣ ಭಾಗ್ಯ..?

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ: ಈಗಿನ ಕಲ್ಯಾಣ ಕರ್ನಾಟಕದ ಹಿಂದಿನ ಕಥೆ ಏನು?

Hyderabad Karnataka Vimochana Dina: 1947 ಆಗಸ್ಟ್‌ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಮೋಂಡುತನದ ಹೈದರಾಬಾದ್‌ ಪ್ರಾಂತ್ಯದ ರಾಜ‌ ನಿಜಾಮ (Nizam Mir Osman Ali Khan), ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದರು. ಇದರಿಂದಾಗಿ ಹೈದರಾಬಾದ್‌ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು‌. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.

 

 

 

 

 

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಿರಲಿಲ್ಲ

ಹೈದರಾಬಾದ್ ಕರ್ನಾಟಕ ಭಾಗಕ್ಕೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ

ಹೋರಾಟ ಬಗ್ಗು ಬಡಿಯಲು ನಿಜಾಮ ತನ್ನ ಖಾಸಗಿ ಸೈನ್ಯ ರಜಾಕಾರ ಪಡೆ ಸಜ್ಜುಗೊಳಿಸಿದನು

ಮರೆಯಲಾಗದ ಗೋರ್ಟಾ ಹತ್ಯಾಕಾಂಡ

 

 

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಮತ್ತು ಹೈದರಾಬಾದ್‌ನ ಕೊನೆಯ ನಿಜಾಮ ಭೇಟಿ-ಚಿತ್ರ: ಟ್ವಿಟರ್ ವಿಡಿಯೊದ ಸ್ಕ್ರೀನ್‌ ಶಾಟ್‌

 

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತ ದೇಶಕ್ಕೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ (Hyderabad Karnataka) ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಕಲ್ಯಾಣ ಕರ್ನಾಟಕ (Kalyana Karnataka) ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ.

 

1947 ಆಗಸ್ಟ್‌ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಮೋಂಡುತನದ ಹೈದರಾಬಾದ್‌ ಪ್ರಾಂತ್ಯದ ರಾಜ‌ ನಿಜಾಮ, ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದರು. ಇದರಿಂದಾಗಿ ಹೈದರಾಬಾದ್‌ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು‌. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.

ಗೋವಾ-ಹೈದರಾಬಾದ್‌ ಎಕನಾಮಿಕ್‌ ಕಾರಿಡಾರ್‌: ರಾಯಚೂರು-ಬೆಳಗಾವಿ ಮಧ್ಯೆ ಶೀಘ್ರವೇ ಚತುಷ್ಪಥ ರಸ್ತೆ

 

ರಜಾಕಾರ ಪಡೆ ಪ್ರವೇಶ:

 

ಈ ಭಾಗದ ಬಹುತೇಕರು ಭಾರತದ ಒಕ್ಕೂಟ ಸೇರುವ ಬಯಕೆ ಹೊಂದಿದ್ದರು. ಹೋರಾಟ ಕೂಡಾ ನಡೆಸಿದ್ದರು. ಅವರ‌ ಕೂಗು ಹತ್ತಿಕ್ಕಲು, ಹೋರಾಟ ಬಗ್ಗು ಬಡಿಯಲು ನಿಜಾಮ ತನ್ನ ಖಾಸಗಿ ಸೈನ್ಯ ರಜಾಕಾರಪಡೆ ಸಜ್ಜುಗೊಳಿಸಿದನು. ವಿಮೋಚನಾ ಹೋರಾಟ ಹತ್ತಿಕ್ಕಲು ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎಂಬ ಮತಾಂಧನಿಗೆ ನಿಜಾಮ‌‌ ಸಂಪುರ್ಣ ಸ್ವತಂತ್ರ ನೀಡಿದ. 1947 ಜುಲೈ ತಿಂಗಳಲ್ಲಿ ನಿಜಾಮ, ಹೋರಾಟ ನಿರತರ ಬಂಧನಕ್ಕೆ ಆದೇಶ ಹೊರಡಿಸಿದ. ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿ ನಿಜಾಮನ ಸಾರ್ವಭೌಮತ್ವ ಸಂರಕ್ಷಿಸುವ ಜವಾಬ್ದಾರಿ ಹೊತ್ತ ರಜಾಕಾರರು ಮೂರು ಸಾವಿರಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿದರು.‌ ಜೈಲುಗಳು ತುಂಬಿ ಹೋದವು. ನಿಜಾಮನ ಈ ನಿರ್ಧಾರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಯ್ತು. ಆಗ ಸಮಾರೋಪಾದಿಯಲ್ಲಿ ಜನರು ವಿಮೋಚನಾ ಚಳುವಳಿಗೆ ಧುಮುಕಿದರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಚಳವಳಿಗಳು ನಡೆದವು.

 

ಕಲ್ಯಾಣ ಕರ್ನಾಟಕದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಪ್ರಾರಂಭ: ಬಸವರಾಜ ಬೊಮ್ಮಾಯಿ

 

ಹಬ್ಬದ ಹೆಸರಲ್ಲಿ‌ ಜನರನ್ನು ಸೇರಿಸಿದ ಹೋರಾಟಗಾರರು:

 

ನಿಜಾಮನ ರಜಾಕಾರ ಪಡೆ ವಿರುದ್ಧ ಹೋರಾಟ ತೀವ್ರ ಗತಿಯಾಯಿತು. ಕಲಬುರಗಿಯ ಕೊಲ್ಲೂರು ಮಲ್ಲಪ್ಪ, ಚಂದ್ರಶೇಖರ್ ಪಾಟೀಲ, ಡಿ.ಆರ್.ಅವರಾದಿ, ಜಗನ್ನಾಥ್ ರಾವ್ ಚಂಡ್ರಕಿ, ಚಟ್ನಹಳ್ಳಿ ವೀರಣ್ಣ, ಬೀದರ ಜಿಲ್ಲೆಯ ಎಸ್.ಬಿ.ಅವದಾನಿ, ಯಾದಗಿರಿಯ ವಿಶ್ವನಾಥ ರೆಡ್ಡಿ ಮುದ್ನಾಳ, ಕೊಪ್ಪಳದ ಜೆ. ಕೆ. ಪ್ರಾಣೇಶಾಚಾರ್, ಬಂಗಾರಶೆಟ್ಟಿ, ಚಿಟಗುಪ್ಪದ ಹಕೀಕತರಾವ್ ಸೇರಿದಂತೆ ಮೊದಲಾದವರು ಹೋರಾಟ ನಡೆಸಿದರು. ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಿ ರಜಾಕಾರರಿಂದ ಏಟು ತಿಂದರು. ಆದರೆ ಹೋರಾಟ ಮಾತ್ರ ಕೈಬಿಡಲಿಲ್ಲ. ಅಲ್ಲದೇ ಗಣೇಶೋತ್ಸವ, ವಿಜಯ ದಶಮಿ ಹಬ್ಬಗಳ ನೇಪದಲ್ಲಿ ಜನರನ್ನು ಒಂದಡೆ ಸೇರಿಸಿ ವಿಮೋಚನೆಯ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು.

 

ಮರೆಯಲಾಗದ ಗೋರ್ಟಾ ಹತ್ಯಾಕಾಂಡ:

 

ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿರೋದು 1948 ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ ಪಾಟೀಲ ಹಾಗೂ ವಿಠೋಬಾ ನಿರೋಡೆ, ಗೋರ್ಟಾ ಗ್ರಾಮದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದರು. ಈ ವೇಳೆ ರಜಾಕಾರರ ಸಹವರ್ತಿ ಆ ಧ್ವಜ ಇಳಿಸಿದ್ದಲ್ಲದೇ ಬಾವುರಾವ ಪಾಟೀಲರಿಗೆ ಅವಮಾನ ಮಾಡಿದ್ದರು. ಅಲ್ಲದೆ ಪಾಟೀಲರ ಮನೆ ಲೂಟಿ ಮಾಡಿದರು. ಅವಮಾನ, ಮನೆ ಲೂಟಿಯಿಂದ ಆಕ್ರೋಶಗೊಂಡ ಬಾವುರಾವ ಪಾಟೀಲ, ರಜಾಕಾರರ ಸಹವರ್ತಿ ಇಸಾಮುದ್ದೀನನ್ನು ಕೊಂದು ಹಾಕಿದ್ದರು. ಇಸಾಮುದ್ದೀನ್ ಕೊಲೆ ರಜಾಕಾರರನ್ನು ಕೆರಳಿಸಿತು.‌

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಲಬುರಗಿಗೆ ಆಗಮಿಸಿದ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ

 

ಗೋರ್ಟಾ ಗ್ರಾಮದ ಮಹಾದೇವಪ್ಪ ಡುಮಣಿ ಎಂಬ ಸಾಹುಕಾರರ ಮನೆ ಅಬೇಧ್ಯ ಕೋಟೆಯಾಗಿತ್ತು. ಹೀಗಾಗಿ, ಅಲ್ಲಿ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳು ಆಶ್ರಯ ಪಡೆಯುತ್ತಿದ್ದರು. ರಜಾಕರು ದಾಳಿ ವೇಳೆ ಅಲ್ಲಿ 800ಕ್ಕೂ ಹೆಚ್ಚು ಜನರು ಸೇನಾನಿಗಳು ಇದ್ದರು ಎನ್ನಲಾಗಿದೆ. ಇಸಾಮುದ್ದೀನ್‍ನ ಕೊಲೆ ಸೇಡನ್ನು ತೀರಿಸಿಕೊಳ್ಳಲು ಆತನ ಅಣ್ಣ ಚಾಂದ ಪಟೇಲ್‍ ರಜಾಕಾರರ ಪಡೆಯ ನೇತೃತ್ವ ವಹಿಸಿ ಗೋರ್ಟಾ ಗ್ರಾಮ ಗುರಿಯಾಗಿಸಿಕೊಂಡು ದಾಳಿ ಮಾಡಿ ಎಲ್ಲರನ್ನು ಹತ್ಯೆಗೈದ ಎಂಬ ಕರಾಳ ಇತಿಹಾಸವಿದೆ.

 

ಭಾರತ ಏಕೀಕರಣದ ರೂವಾರಿ ಸರ್ದಾರ ವಲ್ಲಭಭಾಯಿ ಪಟೇಲ್ ಎಂಟ್ರಿ:

 

ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಿಂದ ಸಹನೆ ಕಳೆದುಕೊಂಡ‌‌ ಸೇನಾನಿಗಳು ಪ್ರತಿಕಾರವಾಗಿ ಹಲವು ರಜಾಕಾರರನ್ನು ಕೊಂದು ಹಾಕಿದರು. ಇದರಿಂದ ಮತಾಂಧನಾಗಿದ್ದ ರಜ್ವಿಗೆ ರೊಚ್ಚಿಗೆದ್ದ, ರಕ್ತದೋಕುಳಿಯೇ ಹರಿಸಿಬಿಟ್ಟ, ಎಲ್ಲಡೆ ಕೊಲೆ, ಸುಲಿಗೆ, ಅತ್ಯಾಚಾರಗಳು‌ ಹೆಚ್ಚಾದವು. ಆಗ ಹೋರಾಟಗಾರರು ಅಂದಿನ ಗೃಹ ಮಂತ್ರಿ, ಭಾರತ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿಯಾದರು. ಪಟೇಲ್ ಅವರು ಖಾಸಿಂ ರಜ್ವಿಯ ಮಟ್ಟ ಹಾಕೋಕೆ ಪ್ಲ್ಯಾನ್ ಹಾಕಿದರು. ಇವರನ್ನು ಸದೆಬಡೆಯಲು ಮಿಲಿಟರಿ ಪಡೆ ಕಾರ್ಯಾಚರಣೆಗಿಳಿಸಲು ಚಿಂತಿಸಿದ್ದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ 316 ಬಸ್‌ಗಳ ಖರೀದಿಸಲು ಸರಕಾರ ಅನುಮೋದನೆ

 

 

 

ಅಡ್ಡಿಯಾದ ಒಪ್ಪಂದ; ಡಾ. ಬಿ.ಆರ್. ಅಂಬೇಡ್ಕರ್ ಉಪಾಯ:

 

ಭಾರತ ಸರ್ಕಾರ ಮತ್ತು ನಿಜಾಮನ ಮಧ್ಯೆ ನಡೆದಿದ್ದ ಗಡಿ ಒಪ್ಪಂದ ‘ಸ್ಟ್ಯಾಂಡ್ ಸ್ಟಿಲ್ ಆಗ್ರಿಮೆಂಟ್’ ಪ್ರಕಾರ ಭಾರತೀಯ ಸೇನೆಯು ಹೈದರಾಬಾದ್‌ ಸರಕಾರವನ್ನು ಮುಟ್ಟುವಂತಿರಲಿಲ್ಲ. ಇದು ಕಾರ್ಯಚರಣೆಗೆ ಅಡ್ಡಿಯಾಗಿ ಮಿಲಿಟರಿ ಪಡೆಯನ್ನು ಕಾರ್ಯಚರಣೆಗೆ ಇಳಿಸಲು ಆಗಲಿಲ್ಲ. ಆಗ ಸರ್ದಾರ್ ವಲ್ಲಭಭಾಯಿ ಪಟೇಲ್‌ ಹಾಗೂ ಅಂಬೇಡ್ಕರ್ ಸೇರಿ ‘ಆಪರೇಷನ್‌ ಪೊಲೋ’ ಹೆಸರಿನಲ್ಲಿ ಪೊಲೀಸ್ ಕಾರ್ಯಚರಣೆ ನಡೆಸಿ, ಹೈದರಾಬಾದ್ ನಿಜಾಮನ ಹುಟ್ಟಡಗಿಸಿದರು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಚತರುತೆ ಹಾಗೂ ಉಕ್ಕಿನ ಮನುಷ್ಯ ಪಟೇಲ್ ಅವರ ಗಟ್ಟಿತನದಿಂದ ಹೈದರಾಬಾದ್‌ ಕರ್ನಾಟಕ ವಿಮೋಚನೆಗೊಂಡಿದೆ ಎಂದು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ.

 

ಕಲ್ಯಾಣ ಕರ್ನಾಟಕದ ಬಿಜೆಪಿ ಕ್ಷೇತ್ರಗಳಿಗೆ ಬೆಣ್ಣೆ..! ಕಾಂಗ್ರೆಸ್ ಕ್ಷೇತ್ರಗಳಿಗೆ ಸುಣ್ಣ..?

 

ಭಾರತ ಸರ್ಕಾರದ ಮುಂದೆ ಶರಣಾದ ನಿಜಾಮ:

 

ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸುವ ಮೂಲಕ ನಿಜಾಮನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು. ತಾನಾಗಿಯೇ ತನ್ನ ಸೋಲು ಒಪ್ಪಿಕೊಂಡ ನಿಜಾಮ ಸೆ.17, 1948ರಲ್ಲಿ ಭಾರತ ಒಕ್ಕೂಟಕ್ಕೆ ಹೈದ್ರಾಬಾದ್‌ ರಾಜ್ಯವನ್ನು ಒಪ್ಪಿಸಿದ. ಅಂದು ಸಹಸ್ರಾರು ಜನರ ಹೋರಾಟದ ಪರಿಣಾಮ ಇಂದು ಹೈದರಾಬಾದ್‌ ಕರ್ನಾಟಕ ಪ್ರಾಂತ್ಯಕ್ಕೆ ವಿಮೋಚನೆ ಸಿಕ್ಕು ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.

 

ಆರ್ಥಿಕ ಸಮೀಕ್ಷೆ ಪ್ರಕಟ: ತಲಾ ಆದಾಯದಲ್ಲಿ ಮತ್ತೆ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು!

 

ಏಳು ದಶಕ ಕಳೆದರು ಮುಂದುವರೆದ ಅಸಮತೋಲನ:

 

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಗತಿಸುತ್ತಿವೆ. ಆದರೆ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ ಅನ್ನೋದು ಈ ಭಾಗದ ಜನರ ಅಸಮಧಾನ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಎನ್. ಧರ್ಮಸಿಂಗ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೈದರಾಬಾದ್ ಕರ್ನಾಟಕ ಅಸಮತೋಲನ ಸರಿದೂಗಿಸಲು 371 ಜೆ ವಿಧೇಯಕ ಒದಗಿಸುವಲ್ಲಿ ಸಫಲರಾದರು. ಮಾಜಿ ಸಚಿವ ವೈಜನಾಥ ಪಾಟೀಲ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ನಾಗಲಿಂಗಯ್ಯ ಮಠಪತಿ ಸೇರಿದಂತೆ ನೂರಾರು ಜನರ ಹೋರಾಟದ ಫಲವಾಗಿ ಈಗ 371(ಜೆ) ಕಲಂ ಜಾರಿಯಾಗಿದೆ. ನಂತರ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಹೈದರಾಬಾದ್‌ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಿ ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸುತ್ತಿದ್ದಾರೆ. ಸದ್ಯ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಗಿರುವುದು ಹೊರತುಪಡಿಸಿದರೆ, ಅಭಿವೃದ್ದಿಯಲ್ಲಿ ಮಾತ್ರ ಕಲ್ಯಾಣ ಆಗುತ್ತಿಲ್ಲ ಎಂಬ ಜನರ ಆರೋಪ ಮುಂದುವರೆದಿದೆ.