ಶಾಂತಿ ಮತ್ತು ಪ್ರೀತಿ ಹಾಗೂ ಉತ್ತಮ ಸಂಸ್ಕೃತಿಗೆ ಹೆಸರಾದ ಕನ್ನಡ ನಾಡಿಗೆ ಎಪ್ಪತ್ತನೇಯ ಸಂಭ್ರಮ. ಅಖಂಡ ಕನ್ನಡಿಗರು ಎಪ್ಪನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಭ್ರಮ ಮತ್ತು ಸಡಗರದಲ್ಲಿದ್ದಾರೆ. ನವೆಂಬರ್ ಒಂದು ಕನ್ನಡ ನಾಡಿನ ಮತ್ತು ನಾಗರಿಕರ ಪಾಲಿಗೆ ವಿಶೇಷ ದಿನ. ಇತಿಹಾಸಿಕ ಚರಿತ್ರೆ ಇರುವ ಕನ್ನಡ ರಾಜ್ಯೋತ್ಸವದ ಚಾರಿತ್ರಿಕ ಹಿನ್ನೆಲೆ ಮತ್ತು ಮಹತ್ವವನ್ನು ಕನ್ನಡಿಗರು ಸಮಗ್ರವಾಗಿ ಅಧ್ಯಯನ ನಡೆಸುವುದು ಉತ್ಸವದ ಪೂರ್ಣತೆ. ಕನ್ನಡ ರಾಜ್ಯೋತ್ಸವವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಗೀತ, ನೃತ್ಯ ಮತ್ತು ಕರ್ನಾಟಕದ ಸಮೃದ್ಧ, ಸಂಸ್ಕೃತಿಯನ್ನು ಪ್ರದರ್ಶಿಸುವ ಮತ್ತು ಉತ್ತೇಜಿಸುವ ವ್ಯವಸ್ಥಿತ ವೇದಿಕೆಯಾಗಿದೆ. ಜೊತೆಗೆ ಕನ್ನಡಿಗರ ಐಕ್ಯತೆ ಮತ್ತು ಅಭಿಮಾನದ ಸಂಭ್ರಮವು ಕೂಡ. ಭಾಷಾಧಾರಿತ ಕನ್ನಡಿಗರ ಏಕೈಕ ಈ ಹಬ್ಬವು ರಾಜ್ಯದ ಎಲ್ಲಾ ಕನ್ನಡಿಗರಲ್ಲಿ ಐಕ್ಯತೆ ಮತ್ತು ಅಭಿಮಾನವನ್ನು ಬೆಳೆಸುತ್ತಿದೆ. ಸಂದರ್ಭದಲ್ಲಿ ಕನ್ನಡಿಗರೊಂದಿಗೆ ಹೇಳಲಿಕ್ಕಿರುವುದು “ಕನ್ನಡ” ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಬೇಕು. ಮಕ್ಕಳೊಂದಿಗೆ ಕನ್ನಡದಲ್ಲಿ ವ್ಯವಹರಿಸುವ ಬಗ್ಗೆ ಪೋಷಕರು ಕಾಳಜಿವಹಿಸಬೇಕು. ಖಾಸಗಿ ಸಂಸ್ಥೆಗಳಲ್ಲೂ ಕನ್ನಡ ಭಾಷೆ ಮತ್ತು ಪ್ರಚಾರಕ್ಕಾಗಿ ಪ್ರತ್ಯೇಕವಾದ ಯೋಜನೆಗಳನ್ನು ರೂಪಿಸಬೇಕು. ಕನ್ನಡ ರಾಜ್ಯೋತ್ಸವ ಎಂಬ ಸಂಭ್ರಮ ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನೆನಪಿಸುತ್ತಿದೆ. ಅವೆಲ್ಲವನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ. ಜಾತಿ, ಧರ್ಮದ ಹೆಸರಿನಲ್ಲಿ ಕನ್ನಡಿಗರ ಮನಸ್ಸು ಹರಿದು ಹಂಚಿಹೋಗದೆ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡೋಣ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ಆಗ್ರಹಿಸಿದರು.
