ವಿಜಯಪುರ ವೃಕ್ಷೋಥಾನ್ ಹೇರಿಟೇಜ್ ರನ್ ನಲ್ಲಿ ಓಡಲಿರುವ 73ರ ಅಜ್ಜಿ ಇವರ ಬಗ್ಗೆ ನಿಮಗೇಷ್ಟು ಗೊತ್ತು?

ವಿಜಯಪುರ ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್-2024ಕ್ಕೆ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ಹಿರಿಯ ನಾಗರಿಕರೂ ಕೂಡ ನೋಂದಣಿ ಮಾಡಿಸುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

 

ಉಡುಪಿ ಕಟಪಾಡಿಯವರಾದ ಮತ್ತು ಹಾಲಿ ಪಂಚಕಲ್ ನಿವಾಸಿಯಾಗಿರುವ 73 ವರ್ಷದ ಸುಲತಾ ಕಾಮತ ಈ ಬಾರಿಯೂ ವೃಕ್ಷೋಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳುತ್ತಿದ್ದು ಗಮನ ಸೆಳೆದಿದ್ದಾರೆ.

 

ಕಳೆದ 30 ವರ್ಷದಿಂದ ದೇಶ ವಿದೇಶಗಳ ನಾನಾ ಭಾಗಗಳಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡಿರುವ ಸುಲತಾ ಕಾಮತ, ತಿಂಗಳಲ್ಲಿ ಕನಿಷ್ಠ ಮೂರ್ನಾಲ್ಕು ಮ್ಯಾರಾಥಾನ್ ಗಳಲ್ಲಿ ಓಡುವ ಮೂಲಕ ಮ್ಯಾರಾಥಾನ್ ಪಟುಗಳಲ್ಲಿ ಮನೆಮಾತಾಗಿದ್ದಾರೆ. ಈವರೆಗೆ ಸುಮಾರು 1200ಕ್ಕೂ ಹೆಚ್ಚು ಚಿನ್ನ, ಬೆಳ್ಳಿ, ರಜತ ಪದಕಗಳನ್ನೂ ಜಯಿಸಿರುವ ಇವರು ವಿಜಯಪುರ ವೃಕ್ಷೋಥಾನ್ ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

 

73ನೇ ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಅವರು, ತಮ್ಮೂರಿನಲ್ಲಿ ನೀರಿನ ವ್ಯಾಪಾರ ಮಾಡುತ್ತ ಕ್ಯಾನ್ ಗಳನ್ನೂ ಎತ್ತಿ ವಾಹನದಲ್ಲಿ ಹಾಕುತ್ತ ಆರೋಗ್ಯವನ್ನು ಸದೃಢವಾಗಿಸಿಕೊಂಡಿದ್ದಾರೆ.

 

ಇವರು ಭಾರತವಷ್ಟೇ ಅಲ್ಲ, ಸಿಂಗಪೂರ, ಮಲೇಷ್ಯಾ ಸೇರಿದಂತೆ ಇತರ ದೇಶಗಳಲ್ಲಿಯೂ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡು ಭೇಷ್ ಎನಿಸಿಕೊಂಡಿದ್ದಾರೆ. ಕಾಲೇಜು ದಿನಗಳಿಂದಲೇ ಓಡುವ ಹವ್ಯಾಸ ರೂಢಿ ಮಾಡಿಕೊಂಡಿರುವ ಇವರು 2006 ರಿಂದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಳ್ಳುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ಬಿ. ಎ ಪದವಿಧರೆಯಾಗಿರುವ ಸುಲತಾ ಕಾಮತ ಅಡುಗೆ ಮಾಡುವುದರಲ್ಲಿ, ನಾಟಕ, ಯಕ್ಷಗಾನ, ಹೂವು, ಗೊಂಬೆ ತಯಾರಿಕೆ, ಕುಶಲಕಲೆ, ಸ್ಕ್ರೀನ್ ಪ್ರಿಂಟಿಂಗ್ ಮಾಡುತ್ತ ಸಾಕು ಪ್ರಾಣಿಗಳನ್ನು ಸಾಕುತ್ತಿದ್ದಾರೆ.

 

2006 ರಿಂದ ಈವರೆಗೆ ದೇಶದಲ್ಲಿ ನಡೆದ ಬಹುತೇಕ ಎಲ್ಲ 21 ಕಿ. ಮೀ. ಹಾಫ್ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೋಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ 23 ಬಾರಿ ಪ್ರತಿನಿಧಿಸಿ ಹಲವಾರು ಬಾರಿ ಪದಕ ಗೆದ್ದಿದ್ದಾರೆ. 2022ರಲ್ಲಿ ಉಡುಪಿಯಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2023ರಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ 10 ಕಿ. ಮೀ. ಮತ್ತು 5 ಕಿ. ಮೀ. ಎರಡೂ ಓಟಗಳಲ್ಲಿ ಚಿನ್ನದ ಪದಕ 5 ಕಿ. ಮೀ. ವಾಕಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

 

2023ರಲ್ಲಿ ನಾಸಿಕ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟ ದಲ್ಲಿ 5 ಕಿ. ಮೀ. ವಾಕಿಂಗ್ ನಲ್ಲಿ ಬೆಳ್ಳಿ, 10 ಕಿ. ಮೀ. ಓಟದಲ್ಲಿ ಚಿನ್ನ ಹಾಗೂ 5 ಕಿ. ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ದಕ್ಷಿಣ ಭಾರತದ ಪ್ರಥಮ ಮಾಸ್ಟರ್ಸ್ ಅಥ್ಲೇಟಿಕ್ ಓಪನ್ ಚಾಂಪಿಯನಶಿಪ್ ನಲ್ಲಿ5 ಕಿ. ಮೀ. ಮತ್ತು 10 ಕಿ. ಮೀ. ಎರಡೂ ಓಟಗಳಲ್ಲಿ ಚಿನ್ನ ಹಾಗೂ 400 ಮೀ. ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ಯಾನ್ ಇಂಡಿಯಾ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ 10 ಕಿ. ಮೀ. ಮತ್ತು 5 ಕಿ. ಮೀ. ಓಟದಲ್ಲಿ ಚಿನ್ನ, 5 ಕಿ. ಮೀ. ವಾಕಿಂಗ್ ನಲ್ಲಿ ಚಿನ್ನ ಹಾಗೂ 4×100 ರಿಲೇ ಮತ್ತು 4×400 ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿದ್ದಾರೆ.

 

ಶಿವಮೊಗ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟ ದಲ್ಲಿ 5 ಕಿ. ಮೀ. ವಾಕಿಂಗ್ ನಲ್ಲಿ ಬೆಳ್ಳಿ, 2 ಕಿ. ಮೀ. ಸ್ಟಿಪಲ್ ಚೇಸ್ ನಲ್ಲಿ ಚಿನ್ನ, 400 ಮೀ. ಓಟದಲ್ಲಿ ಚಿನ್ನ ಹಾಗೂ 400×100 ಮೀಟರ್ ರಿಲೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2023ರಲ್ಲಿ ಫೆಸಿಪಿಕ್ ಮಾಸ್ಟರ್ ಅಥ್ಲೆಟಿಕ್ಸ್ ಸೇರಿದಂತೆ ಇನ್ನೂ ಹಲವಾರು ಮ್ಯಾರಾಥಾನ್ ಗಳಲ್ಲಿ ಅವರು ಚಿನ್ನದ ಪದಕ ಕಳಿಸಿದ್ದಾರೆ. ಪ್ರಶಸ್ತಿ ಮತ್ತು ಟ್ರೋಫಿಗಳು ಇವರಿಗೆ ಲೀಲಾಜಾಲವಾಗಿ ಒಲಿದು ಬರುತ್ತಿರುವುದು ಇವರು ಇಂಥ ಇಳಿ ವಯಸ್ಸಿನಲ್ಲಿಯೂ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ವೃಕ್ಷೋಥಾನ್ ಹೆರಿಟೇಜ್ ರನ್-2024ರ ನೋಂದಣಿ ಸಮಿತಿಯ ಶೋಭಾ ನರೇನ.

 

ವರದಿ : ದೌಲಪ್ಪ ಮನಗೋಳಿ 

error: Content is protected !!