ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ ಈ ಘಟನೆ ನಡೆದಿದೆ.

ಮೂಲತಃ ಬುಲಂದ್‌ಶಹರ್‌ನ ಕಾಲೆ ಕಾ ನಾಗ್ಲಾ ಗ್ರಾಮದ ಮಹಿಳೆ ನವೆಂಬರ್ 22 ರಂದು ಪಿಪಲ್ಸಾನಾ ಚೌಧರಿ ಗ್ರಾಮದ ದೀಪಕ್ ಯಾದವ್ ಅವರನ್ನು ವಿವಾಹವಾಗಿದ್ದರು.

 

ಮದುವೆಯಾದ ಬಳಿಕ ಗಂಡನ ಮನೆಗೆ ಬಂದಿದ್ದು, ಕೇವಲ 5 ದಿನಗಳಲ್ಲೇ ದುರಂತ ಸಾವಿಗೀಡಾಗಿದ್ದಾರೆ.

 

ಕುಟುಂಬಸ್ಥರ ಪ್ರಕಾರ, ಮಹಿಳೆ ಸಂಜೆ ಸ್ನಾನ ಮಾಡಲು ಹೋಗಿದ್ದು, ಆದರೆ ಬಹಳ ಸಮಯದವರೆಗೆ ಹೊರಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪತಿ ಹಾಗೂ ಕುಟುಂಬಸ್ಥರು ಹಲವು ಬಾರಿ ಕರೆದರೂ ಸ್ಪಂದಿಸಿರಲಿಲ್ಲ. ಅಂತಿಮವಾಗಿ ಬಾತ್ರೂಮ್ ಬಾಗಿಲು ಒಡೆದು ನೋಡಿದಾಗ, ಮಹಿಳೆ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ ಜೊತೆಗೆ ಗೀಸರ್ ಸ್ಫೋಟಗೊಂಡಿರುವುದೂ ಗೊತ್ತಾಗಿದೆ.

 

ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಈಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

error: Content is protected !!