ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೇಂದ್ರ ಸಮಿತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ನಾಡು ಕಂಡ ಮಹಾನ್ ಶರಣ ಚಿಂತಕ, ಸುಪ್ರಸಿದ್ಧ ಸಾಹಿತಿ, ಬಸವಾನುಯಾಯಿ ರಂಜಾನ್ ದರ್ಗಾರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು, ವಾಸು ಸಮುದ್ರವಳ್ಳಿ, ತುಮಕೂರು ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ, ಹಿರಿಯ ಸಾಹಿತಿ ಡಾ. ಬಿ.ಸಿ.ಶೈಲಾ ನಾಗರಾಜ್, ತಾಲ್ಲೂಕು ಅಧ್ಯಕ್ಷೆ ಡಾ. ಚಿ.ದೇ. ಸೌಮ್ಯ, ಹೋಬಳಿ ಘಟಕದ ಅಧ್ಯಕ್ಷ ಸಿದ್ದೇಶ್ ಕುಮಾರ್ ವೈ.ಟಿ. ಸೇರಿದಂತೆ ಹಲವರು ಹಾಜರಿದ್ದರು.
ಸಮ್ಮೇಳನವು ಶರಣ ಸಂತ, ಮಹಾತಪಸ್ವಿ ಶ್ರೀ ಸಿದ್ದಲಿಂಗೇಶ್ವರರ ಕರ್ಮಭೂಮಿಯಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ೨೦೨೪ ಡಿಸೆಂಬರ್ ೨೯ ಭಾನುವಾರ ನಡೆಯಲಿದ್ದು, ಕಲ್ಬುರ್ಗಿ ಜಿಲ್ಲೆಯ ಶ್ರೀ ತೋಟದಾರ್ಯ ಅನುಭವ ಮಂಟಪ, ಆಳಂದ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ತುಮಕೂರಿನ ಹಿರಿಯ ಸಾಹಿತಿ ಹಾಗೂ ಹೋರಾಟಗಾರ್ತಿ ಡಾ. ಬಿ.ಸಿ.ಶೈಲಾ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಉಪಾಧ್ಯಕ್ಷರಾದ ಟಿ. ಸತೀಶ್ ಜವರೇಗೌಡರವರು ಶರಣ ಸಂಕುಲ ರತ್ನ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಎಚ್. ಎಸ್. ಮಹೇಶ್, ಎಡೆಯೂರು ಶ್ರೀ ಕ್ಷೇತ್ರದ ದಾಸೋಹ ಸಮಿತಿಯ ವ್ಯವಸ್ಥಾಪಕರಾದ ಜಿ.ಎನ್. ಪ್ರಭುಲಿಂಗಸ್ವಾಮಿ, ಎಡೆಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಲ್. ಚಂದ್ರಹಾಸ, ಎಡೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಗೆಮ್ಮ, ಉಪಾಧ್ಯಕ್ಷ ಬಿ.ಎಸ್.ಲಕ್ಷ್ಮಣ, ಮಾಜಿ ಅಧ್ಯಕ್ಷ ವೈ. ಜಿ. ಕೃಷ್ಣಮೂರ್ತಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ನಡೆಯಲಿರುವ ವಿಚಾರಗೋಷ್ಠಿ ಹಾಗೂ ವಚನ ನಿರ್ವಚನ ಗೋಷ್ಠಿಯ ಸಾನಿಧ್ಯವನ್ನು ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಶ್ರೀ ಉರಿಲಿಂಗೇಶ್ವರ ಕ್ಷೇತ್ರದ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ವಹಿಸಲಿದ್ದು, ತುಮಕೂರು ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ ಅಧ್ಯಕ್ಷತೆ ವಹಿಸಲಿದ್ದು, ತಾಲ್ಲೂಕು ಅಧ್ಯಕ್ಷೆ ಡಾ. ಚಿ. ದೇ. ಸೌಮ್ಯ ಆಶಯ ನುಡಿಗಳನ್ನಾಡುವರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಹಸೀನಾ ಎಚ್.ಕೆ.; ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷೆ ಶಿವಲೀಲಾ ಹುಣಸಗಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ, ಪ್ರಸಿದ್ಧ ವಾಗ್ಮಿ, ಚಲನಚಿತ್ರ ನಟ ಡಾ. ಚಿಕ್ಕ ಹೆಜ್ಜಾಜಿ ಮಹದೇವ್ ಅವರು “ವರ್ತಮಾನದ ತಲ್ಲಣಗಳು ಮತ್ತು ಶರಣ ಸಂಸ್ಕೃತಿಯ ಅನಿವಾರ್ಯತೆ”; ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಧಾರವಾಡ ಜಿಲ್ಲಾಧ್ಯಕ್ಷರಾದ ಎ. ಎ. ದರ್ಗಾರವರು “ಮಾನವೀಯ ಮೌಲ್ಯಗಳು ಮತ್ತು ಶರಣ ಸಂಸ್ಕೃತಿ”; ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಣಿಬೆನ್ನೂರು ತಾಲ್ಲೂಕು ಅಧ್ಯಕ್ಷೆ ಕವಿತಾ ಸಾರಂಗಮಠ ಅವರು “ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಠಿಕೋನ” ಹಾಗೂ ಹಾಸನದ ಕವಯಿತ್ರಿ ರೇಖಾಪ್ರಕಾಶ್ರವರು “ ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ” ಎಂಬ ವಿಷಯದಡಿ ಉಪನ್ಯಾಸ ನೀಡಲಿದ್ದಾರೆ. ರಾಜ್ಯದ ಪ್ರಸಿದ್ಧ ೨೦ ಕವಿಗಳು ಹನ್ನೆರಡನೇ ಶತಮಾನದ ವಚನಕಾರರ ಪ್ರಮುಖ ವಚನಗಳನ್ನು ನಿರ್ವಚನ ಮಾಡಲಿದ್ದಾರೆ.
ವರದಿ : md ಸೋಹೆಲ್ ಬೈರಾಕದಾರ್