ಔರಾದ್ : ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನಮೆಚ್ಚುಗೆ ಪಡೆದ ನಾಯಕ. ಅವರ ಸರಕಾರದ ಅವಧಿಯಲ್ಲಿನ ಯೋಜನೆಗಳು ಸರ್ವಕಾಲಿಕ ಮಾದರಿಯಾಗಿದೆ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ್ ಔರಾದ್ ತಿಳಿಸಿದ್ದಾರೆ. ಯುಡಿಯೂರಪ್ಪ ಅವರ 83 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿದ ಅವರು, ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕ್ಷೇತ್ರದಲ್ಲಿ ಸಂಘಟನೆ ಆರಂಭಿಸಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಹಲವು ಹೋರಾಟಗಳ ಮೂಲಕ ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಸಮುದಾಯಗಳಿಗೂ ಕಾರ್ಯಕ್ರಮ ಕೊಟ್ಟರು. ಬಡವರಿಗೆ, ಮಹಿಳೆಯರು, ಮಕ್ಕಳಿಗೆ, ರೈತರಿಗೆ ಕಾರ್ಯಕ್ರಮ ಕೊಟ್ಟರು. ಜನ ಯಡಿಯೂರಪ್ಪ ಅವರ ಕಾರ್ಯಕ್ರಮಗಳನ್ನು ಬಯಸುತ್ತಿದ್ದಾರೆ.
ಯಡಿಯೂರಪ್ಪ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಹಳ ಸಂಭ್ರಮದಿಂದ ಅವರ ಜನ್ಮದಿನವನ್ನು ರಾಜ್ಯದೆಲ್ಲೆಡೆ ಆಚರಣೆ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇವತ್ತು ಕಾಂಗ್ರೆಸ್ ದುರಾಡಳಿತ ದೂರ ಮಾಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ ಎಂದು ನಾವೆಲ್ಲರೂ ಭಾವಿಸಬೇಕಿದೆ ಎಂದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಔರಾದಗೆ ಸಾಕಷ್ಟು ಅನುದಾನ ಬಂದಿದ್ದು, ಅನೇಕ ಜನಪರ ಕೆಲಸಗಳು ಆಗಿವೆ. ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಕಾಳಿಜಿ ತೋರಿದ ಯಡಿಯೂರಪ್ಪ ನಾನಾ ಕೆಲಸಗಳು ಮಾಡಿದ್ದಾರೆ ಎಂದರು.
ಪ್ರಮುಖರಾದ ಮಾಜಿ ಜಿಪಂ ಸದಸ್ಯ ವಸಂತ ವಕೀಲ್, ಬಸವರಾಜ ಜೋನ್ನೇಕೆರೆ ಸೇರಿದಂತೆ ಅನೇಕರಿದ್ದರು.
ವರದಿ : ರಾಚಯ್ಯ ಸ್ವಾಮಿ