ಔರಾದ್ : ಸಿಡಿಲು ಬಡಿದ ಪರಿಣಾಮ ಎರಡು ಎತ್ತುಗಳು ಮೃತಪಟ್ಟ ಘಟನೆ ಮಮದಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಹಾವಯ್ಯ ಬಸಯ್ಯ ಸ್ವಾಮಿ ಅವರಿಗೆ ಸೇರಿದ ಎತ್ತುಗಳು ಇದಾಗಿದ್ದು, ಜಮೀನಿನ ಮರದ ಬುಡಕ್ಕೆ ಜೋಡೆತ್ತುಗಳನ್ನು ಕಟ್ಟಿದ್ದರು. ಭಾರಿ ಗಾಳಿ, ಮಿಂಚು, ಗುಡುಗಿನೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಆರಂಭವಾಗಿತ್ತು. ಮಧ್ಯಾಹ್ನ 3:30 ಗಂಟೆಯ ವೇಳೆ ಜೋರಾಗಿ ಅಪ್ಪಳಿಸಿದ ಸಿಡಿಲಿಗೆ ಎತ್ತುಗಳು ಬಲಿಯಾಗಿವೆ. ಮೃತಪಟ್ಟ ಜೋಡೆತ್ತುಗಳನ್ನು ಕಳೆದ ವರ್ಷವೇ 1.50 ಲಕ್ಷಕ್ಕೆ ಔರಾದ್ ಸಂತೆಯಲ್ಲಿ ಖರೀದಿಸಿದರು. ಮಳೆ ನಿಂತ ಬಳಿಕ ಜಮೀನಿಗೆ ಹೋಗಿದ್ದಾಗ ಎತ್ತುಗಳು ಸತ್ತು ಬಿದ್ದಿದ್ದು ಕಂಡು ಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಕೇವಲ 4 ಎಕರೆ ಜಮೀನು ಹೊಂದಿರುವ ಹಾವಯ್ಯ ಸ್ವಾಮಿ ಈ ಎತ್ತುಗಳ ದುಡಿಮೆಯಿಂದಲೇ ಕುಟುಂಬ ನಿರ್ವಹಿಸುತ್ತಿದ್ದರು. ಪಶು ವೈದ್ಯಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕ ಅನ್ವರ್ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಬಳಿಕ ತಹಸೀಲ್ದಾರ್ ಮಹೇಶ ಸ್ವಾಮಿ ಅವರಿಗೆ ಮಾಹಿತಿ ನೀಡಿರುವದಾಗಿ ತಿಳಿಸಿದ್ದಾರೆ. ಹಾವಯ್ಯ ಸ್ವಾಮಿ ಅವರಿಗೆ ಕುಡಲೇ ಪರಿಹಾರ ನೀಡಬೇಕು ಎಂದು ಗ್ರಾಪಂ ಸದಸ್ಯ ಚಂದ್ರಕಾಂತ ಕೋಟಗಿರೆ, ಚನ್ನಯ್ಯ ಸ್ವಾಮಿ, ಶಾಮಣ್ಣ ಮೆಂಗಾ, ಕಲ್ಲಪ್ಪ ರೂಪಾ, ಜಗನ್ನಾಥ ವಾಘಮಾರೆ, ಸಂಗಪ್ಪ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ರಾಚಯ್ಯ ಸ್ವಾಮಿ