ಬಸವಾದಿ ಶರಣರ ಪ್ರತಿಯೊಂದು ವಚನಗಳಲ್ಲಿ ಜೀವನದ ಮೌಲ್ಯಗಳು ಅಡಗಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಪಟ್ಟಣದ ಅನುಭವ ಮಂಟಪದಲ್ಲಿ ಶನಿವಾರ ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ವಚನಗಳಲ್ಲಿ ಜೀವನ ಮೌಲ್ಯಗಳು ಪ್ರವಚನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ರಚಿಸಿದ ವಚನಗಳು ಪ್ರಸ್ತುತವಾಗಿವೆ.
ವಚನಗಳಲ್ಲಿ ಜೀವನ, ಮಾನವೀಯ ಮೌಲ್ಯಗಳು ಅಡಕವಾಗಿವೆ. ಪ್ರತಿಯೊಬ್ಬರೂ ವಚನಗಳನ್ನು ಓದಿ ಅದರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಭೂಮಿ ಮೇಲೆ ಯಾರು ಉಳಿಯುವದಿಲ್ಲ. ಜೀವನ ಸುಂದರವಾಗಿ ನಡೆಸಬೇಕು. ಎಂತಹ ಪರಿಸ್ಥಿತಿ ಬಂದರು ಮನಸ್ಥಿತಿ ಕೆಡಸಿಕೊಳ್ಳಬಾರದು. ಒತ್ತಡ ಜೀವನಕ್ಕೆ ಪ್ರವಚನವೇ ಔಷಧಿಯಾಗಿದೆ. ಮೊಬೈಲ್ ಗೆ ಚಾರ್ಜ್ ಅವಶ್ಯಕತೆ ಇರುವಂತೆ ಮನುಷ್ಯನಿಗೆ ಅಧ್ಯಾತ್ಮಿಕದ ಅವಶ್ಯವಿದೆ ಎಂದರು.
ಪ್ರವಚನಕಾರ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಔರಾದ್ ಕ್ಷೇತ್ರ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ನಡೆದಾಡಿದ ನೆಲವಿದೆ. ಅಲ್ಲದೇ ಹಿರೇಮಠದ ಎಲ್ಲ ಶ್ರೀಗಳು ಔರಾದ್ ತಾಲೂಕಿನವರೇ ಆಗಿದ್ದು, ಇಲ್ಲಿಯೇ ಶಾಲೆ ಕಲಿತಿದ್ದಾರೆ. ಇಂತಹ ಕ್ಷೇತ್ರದಲ್ಲಿ ನಾವುಗಳು ಜನ್ಮತಾಳಿರುವದು ನಮ್ಮ ಪುಣ್ಯ ಎಂದು ಅಭಿಪ್ರಾಯಪಟ್ಟರು. ವಚನಗಳು ಪಚನ ಮಾಡಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು. ಕೇಂದ್ರ ಸರಕಾರ ಬಸವಣ್ಣನ ಚಿಂತನೆಗಳ ಸಂಶೋಧನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ತಾಪಂ ಇಒ ಶಿವಕುಮಾರ ಘಾಟೆ ಧ್ವಜಾರೋಹಣ ನೇರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಉದ್ಯಮಿ ಪ್ರಕಾಶ ಘೂಳೆ, ಪ್ರವಚನ ಸಮಿತಿಯ ಅಧ್ಯಕ್ಷ ಅಮೃತರಾವ ವಟಿಗೆ, ಉಪಾಧ್ಯಕ್ಷ ಕಲ್ಯಾಣರಾವ ಶೆಂಬೆಳ್ಳಿ, ರವೀಂದ್ರ ಮೀಸೆ, ಚಂದು ಘೂಳೆ, ಎನ್. ವ್ಹಿ ಬಿರಾದಾರ್, ಸಿದ್ರಾಮ ನಿಡೋದೆ, ಇಂದುಮತಿ ಎಡವೆ ಸೇರಿದಂತೆ ಅನೇಕರಿದ್ದರು. ಶರಣಪ್ಪ ನಾಗಲಗಿದ್ದೆ ಸ್ವಾಗತಿಸಿ, ನಿರೂಪಿಸಿದರು. ಈ ವೇಳೆ ಬಸವ ಗುರುಕುಲ ಶಾಲೆ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ವರದಿ : ರಾಚಯ್ಯ ಸ್ವಾಮಿ
