ಗ್ಯಾಸ್ ಗೀಸರ್ ಬಳಕೆಯಲ್ಲಿ ಸಾವು ಸಂಭವಿಸುವ ಪ್ರಕರಣಗಳು ನಡೆದಾಗಲೆಲ್ಲ ಜನಸಾಮಾನ್ಯರಲ್ಲಿ, ಇದನ್ನು ಬಳಸುವ ಗ್ರಾಹಕರಲ್ಲಿ ಗ್ಯಾಸ್ ಗೀಸರ್ ನ ಉಪಯೋಗದ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತದೆ. ಗ್ಯಾಸ್ ಗೀಸರ್ ಬಳಕೆಯಲ್ಲಿರುವ ಅಪಾಯಗಳ ಬಗ್ಗೆ ಜನರಿಗೆ ಶಿಕ್ಷಣದ ಕೊರತೆಯಿಂದಾಗಿ, ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿವೆ.ಈ ಚಳಿಗಾಲವು ಇದಕ್ಕೆ ಹೊರತಾಗಿಲ್ಲ. ಮೊನ್ನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಗ್ಯಾಸ್ ಗೀಸರ್ ಸೋರಿಕೆಯ ಪರಿಣಾಮ ಉಸಿರುಗಟ್ಟಿ ಅಕ್ಕ ತಂಗಿ ಸಾವನಪ್ಪಿದ ದುರಂತ ಘಟನೆ ಉದಾಹರಣೆಯಾಗಿದೆ.
ಗ್ಯಾಸ್ ಗೀಸರ್ಗಳಿಂದ ಅನೇಕ ಅಪಾಯಗಳಿವೆ, ಅದರಲ್ಲಿ ಮುಖ್ಯವಾದುದು ಕಾರ್ಬನ್ ಮಾನಾಕ್ಸೈಡ್ ವಿಷತ್ವ. ಸರಿಯಾದ ಗಾಳಿಯ ವ್ಯವಸ್ಥೆ ಇಲ್ಲದ ಮುಚ್ಚಿದ ಸ್ಥಳಗಳಲ್ಲಿ, ವಿಶೇಷವಾಗಿ ಸ್ನಾನದ ಕೋಣೆಗಳಲ್ಲಿ, ಗ್ಯಾಸ್ ಗೀಸರ್ಗಳನ್ನು ಅಳವಡಿಸುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಗ್ಯಾಸ್ ಗೀಸರ್ನಿಂದ ಆಗುವ ಮುಖ್ಯ ಅನಾಹುತಗಳು ಇಲ್ಲಿವೆ:
ಕಾರ್ಬನ್ ಮಾನಾಕ್ಸೈಡ್ ವಿಷತ್ವ
ಗ್ಯಾಸ್ ಗೀಸರ್ನಲ್ಲಿ ಇಂಧನವು ಸಂಪೂರ್ಣವಾಗಿ ದಹನಗೊಳ್ಳದಿದ್ದಾಗ ಬಣ್ಣರಹಿತ ಮತ್ತು ವಾಸನಾರಹಿತ ಕಾರ್ಬನ್ ಮಾನಾಕ್ಸೈಡ್ (CO) ಉತ್ಪತ್ತಿಯಾಗುತ್ತದೆ.
ಗಾಳಿಯ ಸಂಚಾರ ಇಲ್ಲದ ಸ್ನಾನದ ಕೋಣೆಯಂತಹ ಸಣ್ಣ ಜಾಗಗಳಲ್ಲಿ ಈ ಅನಿಲವು ಶೇಖರಣೆಯಾಗುತ್ತದೆ.
ಈ ವಿಷಕಾರಿ ಅನಿಲವನ್ನು ಉಸಿರಾಡಿದಾಗ, ಅದು ರಕ್ತದಲ್ಲಿನ ಆಮ್ಲಜನಕದ ಜಾಗವನ್ನು ಆಕ್ರಮಿಸುತ್ತದೆ, ಇದರಿಂದಾಗಿ ದೇಹಕ್ಕೆ ಆಮ್ಲಜನಕದ ಕೊರತೆಯಾಗುತ್ತದೆ.
ಪರಿಣಾಮವಾಗಿ, ತಲೆನೋವು, ತಲೆಸುತ್ತು, ವಾಕರಿಕೆ, ಉಸಿರಾಟದ ತೊಂದರೆ ಮತ್ತು ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಅತಿಯಾದ ವಿಷತ್ವದ ಸಂದರ್ಭಗಳಲ್ಲಿ, ಇದು ಮೆದುಳಿಗೆ ಹಾನಿ, ಹೃದಯ ಸ್ತಂಭನ ಮತ್ತು ಸಾವಿಗೆ ಕಾರಣವಾಗಬಹುದು.
ಕಳೆದ ಕೆಲವು ವರ್ಷಗಳಲ್ಲಿ ಈ ಕಾರಣದಿಂದಾಗಿ ಹಲವಾರು ಸಾವುಗಳು ವರದಿಯಾಗಿವೆ.
ಬೆಂಕಿ ಮತ್ತು ಸ್ಫೋಟ :
ಗೀಸರ್ ಅಥವಾ ಅನಿಲ ಪೈಪ್ಗಳಿಂದ ಅನಿಲ ಸೋರಿಕೆಯಾದಾಗ, ಯಾವುದೇ ಕಿಡಿ ಅಥವಾ ವಿದ್ಯುತ್ ಸಂಪರ್ಕದಿಂದ ಬೆಂಕಿ ಅಥವಾ ಸ್ಫೋಟ ಸಂಭವಿಸುವ ಅಪಾಯವಿರುತ್ತದೆ.
ಇತರ ಆರೋಗ್ಯ ಸಮಸ್ಯೆಗಳು :
ಕಾರ್ಬನ್ ಮಾನಾಕ್ಸೈಡ್ ವಿಷತ್ವದ ದೀರ್ಘಕಾಲದ ಪರಿಣಾಮಗಳಿಂದ ಮೆದುಳು ಮತ್ತು ಹೃದಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಕೆಲವು ಪ್ರಕರಣಗಳಲ್ಲಿ ಗ್ಯಾಸ್ ಗೀಸರ್ ಎನ್ಸೆಫಲೋಪತಿ ಎಂಬ ಮೆದುಳಿನ ಹಾನಿ ಕೂಡ ಸಂಭವಿಸಬಹುದು.
ಸುರಕ್ಷತಾ ಕ್ರಮಗಳು :
ಈ ಅಪಾಯಗಳನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು,
ಗಾಳಿಯ ಸಂಚಾರ ವ್ಯವಸ್ಥೆ : ಯಾವಾಗಲೂ ಗ್ಯಾಸ್ ಗೀಸರ್ ಅನ್ನು ಗಾಳಿಯ ಸಂಚಾರವಿರುವ ಸ್ಥಳದಲ್ಲಿ ಅಳವಡಿಸಿ. ಸ್ನಾನದ ಕೋಣೆಯಲ್ಲಿ ಅದರ ಅಳವಡಿಕೆ ಅಪಾಯಕಾರಿ.
ಎಕ್ಸಾಸ್ಟ್ ಫ್ಯಾನ್,: ಸ್ನಾನದ ಕೋಣೆಯಲ್ಲಿ ಗೀಸರ್ ಅಳವಡಿಸಿದ್ದರೆ, ಎಕ್ಸಾಸ್ಟ್ ಫ್ಯಾನ್ ಅನ್ನು ಬಳಸಿ ವಿಷಕಾರಿ ಅನಿಲ ಹೊರಹಾಕಿ.
ಗೀಸರ್ ಹೊರಗೆ ಅಳವಡಿಸಿ,:ಗ್ಯಾಸ್ ಗೀಸರನ್ನು ಸ್ನಾನದ ಕೋಣೆಯ ಹೊರಗೆ, ಗೋಡೆಗೆ ಹೊಂದಿಕೊಂಡಂತೆ ಅಳವಡಿಸುವುದು ಅತ್ಯಂತ ಸುರಕ್ಷಿತ.
ನಿಯಮಿತ ಪರಿಶೀಲನೆ : ಅನಿಲ ಸೋರಿಕೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಗೀಸರ್ ಅನ್ನು ನಿಯಮಿತವಾಗಿ ಪರಿಶೀಲಿಸಿ.
ಸೌರ ಅಥವಾ ಎಲೆಕ್ಟ್ರಿಕ್ ಆಯ್ಕೆ : ಹೆಚ್ಚಿನ ಸುರಕ್ಷತೆಗಾಗಿ ಸೌರ ಅಥವ ಎಲೆಕ್ಟ್ರಿಕ್ ವಾಟರ್ ಹೀಟರ್ ಗಳನ್ನು ಬಳಸುವುದು ಗ್ಯಾಸ್ ಗೀಸರ್ ಗಿಂತ ಉತ್ತಮ ಆಯ್ಕೆ.
ಗ್ಯಾಸ್ ಗೀಸರ್ ಗಳಿಂದ ಸಾವುಗಳು ಮತ್ತು ಗಾಯಗಳು ಹಲವಾರು ಕಾರಣಗಳಿಂದ ಮುಂದುವರಿಯುತ್ತವೆ. ಈ ಗೀಸರ್ ಗಳಲ್ಲಿ ಗುಣಮಟ್ಟದ ನಿಯಂತ್ರಣದ ಪ್ರಾಮುಖ್ಯತೆ ಮತ್ತು ಅವುಗಳಿಂದ ಉಂಟಾಗುವ ಸಾವುಗಳ ಸಂಖ್ಯೆಯನ್ನು ಪರಿಗಣಿಸಿ, ಸರ್ಕಾರವು ಬಳಕೆಯಲ್ಲಿರುವ ಎಲ್ಲ ISI ಅಲ್ಲದ ಗುರುತಿನ ಉತ್ಪನ್ನಗಳನ್ನು ಹಿಂಪಡೆಯಬೇಕು ಮತ್ತು ಅವುಗಳನ್ನು ISI ಗುರುತಿನ ಉತ್ಪನ್ನಗಳೊಂದಿಗೆ ಮಾತ್ರ ಬದಲಾಯಿಸುವುದನ್ನು ಖಚಿತಪಡಿಸಿಕೊಳ್ಳಬೇಕು ತಯಾರಕರು ವಿನಿಮಯ ಕೊಡುಗೆಗಳೊಂದಿಗೆ ಬರಲು ಪ್ರೋತ್ಸಾಹಿಸಬೇಕು ಅಂತ ಪ್ರಯತ್ನಗಳ ಅನುಪಸ್ಥಿತಿಯಲ್ಲಿ ಕಳಪೆ ಗುಣಮಟ್ಟದ ಗುಣಮಟ್ಟವಿಲ್ಲದ ಗೀಸರ್ ಗಳು ಬಳಕೆಯಲ್ಲಿರುವುದನ್ನು ಸರ್ಕಾರ ಕಡಿವಾಣ ಹಾಕಬೇಕು.
✍️ಆಯೇಷಾ ಝಬಿ.ಲೇಖಕಿ ಮತ್ತು SDPI ಮೈಸೂರು ಜಿಲ್ಲಾ ಕಾರ್ಯದರ್ಶಿ.
