ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ನ್ಯೂ ಬಿ.ಇ.ಎಲ್ ರಸ್ತೆಯ ರಾಮಯ್ಯ ಸಿಗ್ನಲ್ ಬಸ್ ನಿಲ್ದಾಣದ ಬಳಿ ದಿನಾಂಕ:26/10/2025 ರಂದು ರಾತ್ರಿ ಪಿರ್ಯಾದುದಾರರು ಅವರ ಪತಿ ಹಾಗೂ ಮಗನೊಂದಿಗೆ ದ್ವಿ-ಚಕ್ರ ವಾಹನದಲ್ಲಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಕಡೆಗೆ ಹೋಗುತ್ತಿರಬೇಕಾದರೆ, ರಾಮಯ್ಯ ಆಸ್ಪತ್ರೆಯ ಬಸ್ ಸ್ಟಾಪ್ ಬಳಿ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ನಂಬರ್ ಗೊತ್ತಿಲ್ಲದ ಕೆಂಪು ಬಣ್ಣದ ಟಾಟಾ ಕರ್ವ್ ಕಾರ್ ಚಾಲಕ ತನ್ನ ವಾಹನವನ್ನು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ದ್ವಿ-ಚಕ್ರ ವಾಹನದ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ, ದ್ವಿ-ಚಕ್ರ ವಾಹನದಲ್ಲಿದ್ದ ಪಿರ್ಯಾದುದಾರರು. ಅವರ ಪತಿ ಹಾಗೂ ಮಗನು ರಸ್ತೆಗೆ ಬಿದ್ದಿದ್ದು, ಪಿರ್ಯಾದುದಾರರಿಗೆ ಹಾಗೂ ಅವರ ಪತಿಗೆ ಪೆಟ್ಟುಬಿದ್ದು, ರಕ್ತಗಾಯವಾಗಿರುತ್ತದೆ. ಸಾರ್ವಜನಿಕರ ಸಹಾಯದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಡಿಸ್ ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಿದ್ದು, ಪಿರ್ಯಾದುದಾರರ ಪತಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಸೆಂಟ್ ಜಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ. ಈ ಕುರಿತು ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಿನಾಂಕ:28/10/2025 ರಂದು ಅಪಘಾತಮಾಡಿ ಪರಾರಿಯಾದ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ಸಿ.ಸಿ. ಟಿವಿ ಕ್ಯಾಮರಾಗಳ ಸಹಾಯದಿಂದ ಹಾಗೂ ಘಟನೆ ಆಧಾರದ ಮೇಲೆ ದಿನಾಂಕ:06/11/2025 ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾವಣೆ ನೀಡಿದ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ:07/11/2025 ರಂದು ತಿಂಡ್ಲುವಿನ ಬಾಲಾಜಿ ಲೇಔಟ್ ಬಳಿ ಅಪಘಾತವೆಸಗಿದ್ದ ಕಾರ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಕಾರ್ ಚಾಲಕನನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಕೃತ್ಯವೆಸಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:08/11/2025 ರಂದು ಪ್ರಕರಣದಲ್ಲಿ ಕಾರ್ ಚಾಲಕನು ಕೃತ್ಯವೆಸಗಲು ಬಳಸಿದ್ದ ಟಾಟಾ ಕರ್ವ್ ಕಾರನ್ನು ವಶಪಡಿಸಿಕೊಂಡಿರುತ್ತದೆ. ಅದೇ ದಿನ ಕಾರ್ ಚಾಲಕನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಕಾರ್ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.
ಕೇಂದ್ರ ವಿಭಾಗದ ಮಾನ್ಯ ಉಪ ಪೋಲೀಸ್ ಆಯುಕ್ತರಾದ ಅಕ್ಷಯ್ ಎಂ.ಹಾಕೆ. ಐ.ಪಿ.ಎಸ್. ಹಾಗೂ ಶೇಷಾದ್ರಿಪುರಂ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಕಾಶ್.ಆರ್.ರವರ ಮಾರ್ಗದರ್ಶನದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರವರಾದ ಗಿರೀಶ್ ಮತ್ತು ಸಿಬ್ಬಂದಿಗಳ ತಂಡ ಆರೋಪಿಯನ್ನು ಹಾಗು ಕೃತ್ಯಕ್ಕೆ ಉಪಯೋಗಿಸಿದ ಕಾರ್ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು
