ಔರಾದ್ : ನಾಟಕಗಳು ಮನುಷ್ಯನ ಅಂತರಂಗ ಶುದ್ಧಗೊಳಿಸುತ್ತವೆ. ಅವುಗಳಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಹೇಳಿದರು. ತಾಲೂಕಿನ ಸುಂಧಾಳ ಗ್ರಾಮದಲ್ಲಿ ವಚನ ಚಾರಿಟೇಬಲ್ ಸೊಸೈಟಿ ಬೀದರ ಸಹಯೋಗದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಧಾತ್ರಿ ರಂಗಸಂಸ್ಥೆ ಸಿರಿಗೆರೆ ಕಲಾವಿದರು ನಾಟಕ ಪ್ರದರ್ಶನ ಮಾಡಿದರು. ದೈನಂದಿನ ಬದುಕಿನಲ್ಲಿ ನಾಟಕಗಳು ಸಾಮಾಜಿಕ ಎಚ್ಚರಿಕೆ ಮೂಡಿಸುತ್ತವೆ. ನಾಟಕ ಮನರಂಜನೆ ಅಲ್ಲ, ಕಲೆಯ ಪ್ರದರ್ಶನ ಅಲ್ಲವೇ ಅಲ್ಲ. ಬದುಕಲ್ಲಿ ಅದು ಒಳ್ಳೆಯದ್ದನ್ನು ಮತ್ತು ಕೆಟ್ಟದ್ದನ್ನು ತೋರಿಸುತ್ತಿದೆ. ಆಯ್ಕೆ ನಮಗೆ ಬಿಟ್ಟದ್ದು. ಎಲ್ಲರ ಮನಮುಟ್ಟುವ ನಾಟಕದ ಉದ್ದೇಶ ಸಮಾಜವನ್ನು ಸರಿದಾರಿಗೆ ತರುವುದು ಮತ್ತು ಎಚ್ಚರ ಮೂಡಿಸುವುದು ಆಗಿದೆ. ಮಕ್ಕಳಿಗೆ ಮೊದಲು ಕಲೆ, ಸಾಂಸ್ಕೃತಿಕ ಪರಿಚಯ ಮಾಡಿಕೊಡ ಬೇಕು. ಇದರಿಂದ ಮುಂದಿನ ಪೀಳಿಗೆ ಆರೋಗ್ಯಕರ ವಾತಾವರಣದಲ್ಲಿ ಬೆಳೆಯು ತ್ತಾರೆ ಎಂದು ಹೇಳಿದರು.
ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ನಾವು ಏನನ್ನಾದರೂ ಸಾಧಿಸಬೇಕಾದರೆ, ಬದಲಾವಣೆ ತರಬೇಕಾದರೆ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ರಂಗ ಪರಂಪರೆಯನ್ನು ಉಳಿಸಿ-ಬೆಳೆಸ ಬೇಕಾದ ಅನಿವಾರ್ಯತೆ ಇದೆ ಎಂದರು. ಕಲಾತಂಡದ ವ್ಯವಸ್ಥಾಪಕ ಜಿಎಂ ವಿಜಯಕುಮಾರ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಡರಿ ಆಡೆ, ಕಸಾಪ ಮಾಜಿ ಅಧ್ಯಕ್ಷ ಜಗನ್ನಾಥ ಮೂಲಗೆ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಗ್ರಾಪಂ ಅಧ್ಯಕ್ಷ ಮಾರುತಿ ಸಿಂಗೋಡೆ, ಪಿಡಿಒ ಶ್ರೀಪತಿ ಚಿಟಗೀರೆ, ಗುರುರಾಜ್ ಯಾಧವ್, ಶಿವಕುಮಾರ ಮಜಿಗೆ ಸೇರಿದಂತೆ ಅನೇಕರಿದ್ದರು.
