ಗೂಗಲ್ ಮೀಟ್ ನಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ ಹಾಗೂ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ

ವಿಜಯಪುರ/ರಾಮದುರ್ಗ: ವಿಜಯಪುರ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಮದುರ್ಗ ಇವರ ಸಹಯೋಗದಲ್ಲಿ ಇದೇ ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ *“ಸಂವಿಧಾನ ಜಾಗೃತಿ ಹಾಗೂ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ”* ಕಾರ್ಯಕ್ರಮವು ಗೂಗಲ್ ಮೀಟ್ ನಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಗಲಿದ ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ನುಡಿನಮನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರೊ. ಫರ್ಹಾನಾಜ್ ಮಸ್ಕಿ ರವರು ಮಾತನಾಡಿ ಸಂವಿಧಾನ ಅಂದರೆ ಕೇವಲ ಕಾನೂನುಗಳ ಕಟ್ಟುಪಾಡು ಅಲ್ಲ, ಸಂವಿಧಾನ ಭಾರತೀಯದ ಬದುಕಿನ ದಾರಿದೀಪವಾಗಿದೆ, ನಾವೆಲ್ಲ ಸಂವಿಧಾನದ ಹಕ್ಕುಗಳನ್ನು ಪಡೆಯಲು ಎಷ್ಟು ಗಂಭೀರವಾಗಿ ಸರ್ಕಾರವನ್ನು ಕೇಳುತ್ತೇವೆಯೋ ಅಷ್ಟೇ ಜವಾಬ್ದಾರಿಯುತವಾಗಿ ಸಂವಿಧಾನದ ಕರ್ತವ್ಯಗಳನ್ನು ನಾವೆಲ್ಲ ಪಾಲಿಸಬೇಕು, ಜಾತಿ ಧರ್ಮ ಪ್ರಾಂತೀಯತೆ ಹೆಸರಿನಲ್ಲಿ ಜನರನ್ನು ವಿಂಗಡಿಸುವುದನ್ನು ಬಿಡಬೇಕು, ಪ್ರತಿಭಟನೆ ಹೆಸರಲ್ಲಿ ಸರ್ಕಾರಿ ಆಸ್ತಿಗಳನ್ನು ನಾಶ ಮಾಡುವುದನ್ನು ಬಿಡಬೇಕು, ಸರ್ಕಾರಗಳು ಸಂವಿಧಾನದ ಹಕ್ಕುಗಳನ್ನು ಕೊಡುವಲ್ಲಿ, ನಾಗರಿಕರು ಸಂವಿಧಾನದ ಕರ್ತವ್ಯಗಳನ್ನು ಪಾಲಿಸುವಲ್ಲಿ ಜವಾಬ್ದಾರಿತನ ಮೆರೆದರೆ ಭಾರತ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ವಕೀಲರು ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶಿವಾನಂದ ಯಡಹಳ್ಳಿ ಕೊಂಡಗೂಳಿ ರವರು ಸಮಾಜ ಮತ್ತು ಕಾನೂನು ಪಾಲನೆ ಕುರಿತು ಮಾತನಾಡಿ ನಮ್ಮ ಸಮಾಜದಲ್ಲಿ ಕಾನೂನು ಪಾಲನೆ ಎಷ್ಟು ಪಾರದರ್ಶಕತೆಯಿಂದ ಕೂಡಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ, ಪ್ರಜಾಪ್ರಭುತ್ವದ ನಾಲ್ಕು ಪ್ರಮುಖ ಅಂಗಗಳು ಜನಸಾಮಾನ್ಯರ ಏಳಿಗೆಗೆ ಹೇಗೆ ಸಹಕಾರಿಯಾಗಿವೆ , ಎಲ್ಲಾ ರಂಗಗಳಲ್ಲಿಯೂ ಭ್ರಷ್ಟಾಚಾರದ ವಾಸನೆ ಬರುತ್ತಿದೆ, ರಾಜ್ಯಾಂಗ ನ್ಯಾಯಾಂಗ ಕಾರ್ಯಾಂಗ ಮತ್ತು ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಇವುಗಳ ಕಾರ್ಯಕ್ಷಮತೆ ಸರಿಯಾದ ದಿಕ್ಕಿನಲ್ಲಿದೆಯೇ ಎನ್ನುವುದನ್ನು ಪರಮಾರ್ಶಿಸಬೇಕಿದೆ, ಚುನಾವಣೆಗಳಲ್ಲಿ ಪ್ರಾಮಾಣಿಕರನ್ನು ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಗುಡಿಬಂಡೆ ಫಯಾಜ್ ಅಹ್ಮದ್ ಖಾನ್ ಅವರು ಉಪನ್ಯಾಸ ಮತ್ತು ಮುಖ್ಯ ಅತಿಥಿಗಳ ಭಾಷಣ ಹಾಗೂ ವಿದ್ಯಾರ್ಥಿಗಳ ಭಾಷಣಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕುವೆಂಪು ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯಪುರ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತಿನವರಿಂದ ಮಕ್ಕಳಲ್ಲಿ ಸಂವಿಧಾನ ಜಾಗೃತಿ ಮೂಡಿಸುವ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ನರಗುಂದದ ಅಂಜುಮನ್ ಕಮೀಟಿ ಅಧ್ಯಕ್ಷರಾದ ಐ ಪಿ ಚಂದೂನವರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕುವೆಂಪು ಶಿಕ್ಷಣ ಸಂಸ್ಥೆಯ ಕೋಆರ್ಡಿನೇಟರ್ ಅಫ್ತಾಬ ಸರಮುಲ್ಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾರ್ಥಿ ಅಮೀನಾ ಹತ್ತರಕಿಹಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶಾಹೀಸ್ತಾ ಖಾನಾಪೂರಿ ಸ್ವಾಗತಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಸಂತೋಷ ಪಾಟೀಲ ಮತ್ತು ಪತ್ರಕರ್ತ ಅಮರ ಎನ್ ಕಾಂಬಳೆಯವರು ಪಾಲ್ಗೊಂಡಿದ್ದರು.

ಬಸವನಬಾಗೇವಾಡಿ ಕಚುಸಾಪದ ಅಧ್ಯಕ್ಷರಾದ ಪ್ರಭಾಕರ ಖೇಡದ, ಕವಯಿತ್ರಿ ಹಾಗೂ ಶಿಕ್ಷಕಿಯರಾದ ಗಿರಿಜಾ ಪಾಟೀಲ, ಶಿಕ್ಷಕರಾದ ಎಂ ಹೆಚ್ ಲಷ್ಕರಿ, ಕಾರ್ಯಕ್ರಮದ ಸಂಯೋಜಕ ಹಾಗೂ ವಿಜಯಪುರ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಸ್ಲಂ ಶೇಖ ನರಸಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಾಂದಬಿ ಬಿಜಾಪೂರ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸಂತೋಷ್ ಪಾಟೀಲ, ಕೋಶಾಧ್ಯಕ್ಷರಾದ ಸಂಗಮೇಶ ತಾಳಿಕೋಟಿ, ಬಸವನಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ನೀಲಪ್ಪ ಅಂಗಡಿ, ಬಸವನಬಾಗೇವಾಡಿ ತಾಲೂಕಾ ಉಪಾಧ್ಯಕ್ಷರಾದ ಲಕ್ಷ್ಮೀ ಕಳ್ಳಿಗುಡ್ಡ, ಭೀಮವಾದ ಸುದ್ದಿವಾಹಿನಿ ಸಂಪಾದಕರಾದ ಮೈನು ರಂಗಾಪೂರ ಉಪಸ್ಥಿತರಿದ್ದರು.

ವರದಿ ಎಂ.ಡಿ ಸೋಹೆಲ್ ಬೈರಾಕದಾರ್

error: Content is protected !!