ಲೋಕಾಯುಕ್ತ ಬಲೆಗೆ ಬಿದ್ದ ಯುವ ಉಪವಿಭಾಗಾಧಿಕಾರಿ

ಶಾಲಾ ಮಕ್ಕಳಿಗೆ ಶಿಸ್ತು, ಮಾದರಿ ಬಗ್ಗೆ ಬೋಧನೆ ಮಾಡುತ್ತಿದ ಕಾವ್ಯ ರಾಣಿ, ನ್ಯಾಯಾಂಗ ಬಂಧನಕ್ಕೆ

5.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು

ಜಮೀನಿನ ಖಾತೆ ಮಾಡಿಕೊಡಲು ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಹುಣಸೂರು ಉಪವಿಭಾಗದ ಕೆ.ಎ.ಎಸ್ ಅಧಿಕಾರಿ ಕಾವ್ಯರಾಣಿ.ಕೆ.ವಿ ಹಾಗೂ ಅವರ ಆಪ್ತ ಸಹಾಯಕ ಶಿವಕುಮಾರ್ ಇಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಮೂಲದ ವೈದ್ಯೆ ಡಾಕ್ಟರ್ ರೂಪ ಎಂಬುವವರಿಂದ ಬಾಕಿ ಲಂಚ ಮೊತ್ತ 5.5 ಲಕ್ಷ ರೂಪಾಯಿಗಳನ್ನು ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ.

⛔ಖಾತೆಗೆ 20 ಲಕ್ಷ ಡಿಮ್ಯಾಂಡ್, 10.5 ಲಕ್ಷಕ್ಕೆ ಡೀಲ್⛔

ರೂಪಾ ಅವರಿಗೆ ಎಚ್.ಡಿ. ಕೋಟೆ ತಾಲೂಕಿನ ಸರ್ವೆ ನಂಬರ್ 17/26ರಲ್ಲಿ 4 ಎಕರೆ 20 ಗುಂಟೆ ಜಮೀನಿದ್ದು, ಇದರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಹುಣಸೂರಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ವೈದ್ಯರ ಪರವಾಗಿ ವಿಲೇವಾರಿ ಮಾಡಿ ಖಾತೆ ಮಾಡಿಕೊಡಲು ಕಾವ್ಯರಾಣಿ ಆರಂಭದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮಾತುಕತೆಯ ನಂತರ ಅಂತಿಮವಾಗಿ 10.5 ಲಕ್ಷ ರೂಪಾಯಿ ಲಂಚಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು, ಅದರಂತೆ ಸುಮಾರು 10 ದಿನಗಳ ಹಿಂದೆ ಮೊದಲ ಕಂತಾಗಿ 5 ಲಕ್ಷ ರೂಪಾಯಿಗಳನ್ನು ಕಾವ್ಯರಾಣಿ ಪಡೆದುಕೊಂಡಿದ್ದರು. ಬಾಕಿ ಉಳಿದಿದ್ದ 5.5 ಲಕ್ಷ ರೂಪಾಯಿಗಳನ್ನು ಸೋಮವಾರ ಮಧ್ಯಾಹ್ನ ಹುಣಸೂರಿನಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲೇ ನೀಡುವಂತೆ ಸೂಚಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ರೂಪಾ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

⛔ಸರ್ಕಾರಿ ನಿವಾಸದಲ್ಲೆ ನಡೆದ ದಾಳಿ⛔

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಮೈಸೂರು ಲೋಕಾಯುಕ್ತ ಡಿ.ವೈ.ಎಸ್ಪಿ ಶೈಲೇಂದ್ರ ಹಾಗೂ ಮಡಿಕೇರಿ ಲೋಕಾಯುಕ್ತ ಡಿ.ವೈ.ಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್, ತನಿಖಾಧಿಕಾರಿ ರವಿಕುಮಾರ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಇಂದು ಮಧ್ಯಾಹ್ನ ಕಾವ್ಯರಾಣಿ ಅವರು ತಮ್ಮ ಮನೆಯಲ್ಲಿ 5.50 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದ ಕ್ಷಣದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಲಂಚದ ಹಣ 5.5 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಲಂಚ ಪಡೆಯಲು ಸಹಕರಿಸಿದ ಕಾವ್ಯರಾಣಿ ಆಪ್ತ ಸಹಾಯಕ ಶಿವಕುಮಾರ್‌ನನ್ನೂ ಕೂಡ ವಶಕ್ಕೆ ಪಡೆದಿದ್ದಾರೆ.

⛔ನ್ಯಾಯಾಂಗ ಬಂಧನಕ್ಕೆ ಕಾವ್ಯರಾಣಿ ⛔

ದಾಳಿಯ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ಎಸ್.ಪಿ. ಉದೇಶ್, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯರಾಣಿ ಹಾಗೂ ಆಪ್ತ ಸಹಾಯಕ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌.ಐ.ಆರ್ ದಾಖಲಿಸಲಾಗಿದೆ. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಎಂದು ತಿಳಿಸಿದ್ದಾರೆ.

ಪ್ರತಿಷ್ಠಿತ ಹುದ್ದೆಯಲ್ಲಿದ್ದ ಯುವ ಕೆ.ಎ.ಎಸ್ ಅಧಿಕಾರಿಯೊಬ್ಬರು ಬೃಹತ್ ಮೊತ್ತದ ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಕಂದಾಯ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಇತ್ತೀಚಿಗೆ ಅದ್ದೂರಿಯಾಗಿ ಮದುವೆಯಾಗಿದ್ದ ಕಾವ್ಯ ರಾಣಿ, ಶಾಲಾ ಸಮಾರಂಭಗಳಲ್ಲಿ ಮಾತನಾಡುತ್ತ ಮಕ್ಕಳಿಗೆ ಶಿಸ್ತು ಹಾಗೂ ಮಾದರಿ ಬೋಧನೆಗಳನ್ನು ಮಾಡುತ್ತಾ ಚಪ್ಪಾಳೆ ಗಿಟಿಸಿಕೊಳ್ಳುತ್ತಿದ್ದವರು ಇಂತ ನೀಚ ಕೆಲಸಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ವರದಿ : ಸೈಫನ್ ಮುಲ್ಲಾ

error: Content is protected !!