ಇಬ್ಬರು ಆರೋಪಿಗಳ ಬಂಧನ; ₹3.20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾಗೂ ಬೈಕ್‌ಗಳು ವಶ
ಹುಕ್ಕೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಎಕ್ಸಾರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣ ಸೇರಿದಂತೆ ಸರಣಿ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹುಕ್ಕೇರಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 5ರಂದು ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದ ಕಾಶವ್ವಾ ಕಾಡಪ್ಪಾ ನಿಡಸೋಸಿ ಅವರು ಅವರಗೋಳ ರಸ್ತೆಯ ಬದಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಯುವಕರು ಕಬ್ಬು ಕಡಿಯಲು ಕುರಪಿ ಕೇಳಿ ಪಡೆದುಕೊಂಡಿದ್ದರು. ಕಬ್ಬು ಕಡಿದು ಕುರಪಿ ಮರಳಿ ನೀಡುವ ಸಂದರ್ಭದಲ್ಲಿ ಮಹಿಳೆಯ ಕೊರಳಲ್ಲಿದ್ದ ಸುಮಾರು ₹70 ಸಾವಿರ ಮೌಲ್ಯದ 5 ಗ್ರಾಂ ತೂಕದ ಬಂಗಾರದ ಎಕ್ಸಾರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 207/2026ರಂತೆ ಬಿಎನ್‌ಎಸ್-2023ರ ಕಲಂ 309(4) ಸಹಿತ ಕಲಂ 3(5)ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಗೋಕಾಕ ಡಿವೈಎಸ್ಪಿ ರವಿ ಡಿ. ನಾಯಕ್ ಅವರ ಮಾರ್ಗದರ್ಶನದಲ್ಲಿ, ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಪಿಎಸ್‌ಐ ರಾಜು ಗಸ್ತಿ ಹಾಗೂ ಸಿಬ್ಬಂದಿ ಸಿ.ಡಿ. ಪಾಟೀಲ, ಎ.ಎನ್. ಮಸರಗುಪ್ಪಿ, ಮಂಜುನಾಥ ಕಬ್ಬರ, ಕುಮಾರ ಕರೆನ್ನವರ, ಆರ್.ಎಂ. ಪಡತಾರೆ, ಆರ್.ಯು. ಹನಮನ್ನವರ, ಸೋಮಶೇಖರ ಮಠಪತಿ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ್ ಪಾಟೀಲ ಅವರನ್ನೊಳಗೊಂಡ ತಂಡ ಅಕ್ಟೋಬರ್ 7ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರನ್ನು ಪಲ್ಟಾದ ಕಲಂದರ ಮಹಿಲಾಂದೆ (21) ಹಾಗೂ ರಾಜ್ ಕಲಂದರ ಮಹಿಲಾಂದೆ (18), ಇಬ್ಬರೂ ದುಪದಾಳ, ಗೋಕಾಕ ತಾಲೂಕು, ಹಾಲಿ ಹುಕ್ಕೇರಿ ಶಿವಾಜಿನಗರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಶಿರಗಾಂವ ಪ್ರಕರಣದಲ್ಲಿ ಕಳುವಾಗಿದ್ದ ಸುಮಾರು ₹70 ಸಾವಿರ ಮೌಲ್ಯದ 5 ಗ್ರಾಂ ಬಂಗಾರದ ಎಕ್ಸಾರ ಹಾಗೂ ಕೃತ್ಯಕ್ಕೆ ಬಳಸಿದ್ದ ₹60 ಸಾವಿರ ಮೌಲ್ಯದ ಹೊಂಡಾ ಸೈನ್ ಮೋಟಾರ್ ಸೈಕಲ್ (ಕೆಎ-23-ಇಹೆಚ್-7636) ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಇದೇ ಆರೋಪಿಗಳು ಹುಕ್ಕೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ ಕಿತ್ತುಕೊಂಡಿದ್ದ ಪ್ರಕರಣದಲ್ಲಿಯೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಗ್ರಾಂ ತೂಕದ ಸುಮಾರು ₹1.50 ಲಕ್ಷ ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ, ಕೃತ್ಯಕ್ಕೆ ಬಳಸಿದ್ದ ಸುಮಾರು ₹50 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ (ಕೆಎ-40-ಇಬಿ-2644) ಹಾಗೂ ಮದಿಹಳ್ಳಿ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ₹40 ಸಾವಿರ ಮೌಲ್ಯದ ಹೀರೋ ಎಚ್‌ಎಫ್ ಡೀಲಕ್ಸ್ ಮೋಟಾರ್ ಸೈಕಲ್ (ಕೆಎ-49-ವೈ-6735) ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹುಕ್ಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
