ಮೋಟಾರ್ ಕದ್ದಿದ್ದ ಇಬ್ಬರು ಖದೀಮರ ಅರೆಸ್ಟ್! 3 ಲಕ್ಷ ಮೌಲ್ಯದ ಮಾಲು ವಶ!

ಹುಕ್ಕೇರಿ: ಹೊಲದಲ್ಲಿ ಮೋಟಾರ್, ಸ್ಟಾರ್ಟರ್ ಕದಿಯುತ್ತಿದ್ದ ಇಬ್ಬರು ಕಳ್ಳರ ಬಂಧನ – 3 ಲಕ್ಷದ ಮಾಲು ಜಪ್ತಿ

ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ರೈತರ ಜಮೀನಿನಲ್ಲಿದ್ದ ಕರೆಂಟ್ ಮೋಟಾರ್, ಬೋರ್ವೆಲ್ ಸ್ಟಾರ್ಟರ್ ಮತ್ತು ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಒಟ್ಟು 3 ಲಕ್ಷ ರೂಪಾಯಿ ಮೌಲ್ಯದ ಕಳ್ಳತನದ ಮಾಲು ವಶಪಡಿಸಿಕೊಳ್ಳಲಾಗಿದೆ.

ಅಕ್ಟೋಬರ್ 25 ಮತ್ತು 26 ರಂದು ಶಿರಹಟ್ಟಿ ಬಿ.ಕೆ ಗ್ರಾಮದ ರೈತರಾದ ಕುಮಾರ ಕಲ್ಲಪ್ಪಾ ಖೋತ, ಬಸವಂತಪ್ಪಾ ದಪಾದೂಲಿ, ದಯಾನಂದ ರಸದ್ ಮತ್ತು ಕಾಡಪ್ಪಾ ಕೊಣ್ಣೂರಗಿ ಅವರ ಜಮೀನಿನಲ್ಲಿದ್ದ 5 HP ಮತ್ತು 2 HP ಕರೆಂಟ್ ಮೋಟಾರ್ ಗಳು, L&T ಕಂಪನಿಯ ಸ್ಟಾರ್ಟರ್ ಗಳು ಮತ್ತು ಸುಮಾರು 1000 ಫೂಟ್ ಕೇಬಲ್ ವೈರ್ ಕಳ್ಳತನವಾಗಿತ್ತು. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕೆ. ರಾಮರಾಜನ್ (IPS) ಮತ್ತು ಹೆಚ್ಚುವರಿ SP ಶ್ರೀ ಆರ್.ಬಿ. ಬಸರಗಿ ಹಾಗೂ ಗೋಕಾಕ್ DySP ಶ್ರೀ ರವಿ ಡಿ. ನಾಯಕ ಅವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್.ಆರ್ ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಕಾರ್ಯಾಚರಣೆಯಲ್ಲಿ ಶಿರಹಟ್ಟಿ ಬಿ.ಕೆ ಗ್ರಾಮದ 1) ಬಾಳೆಪ್ಪಾ ರಾಮಪ್ಪಾ ಹಾಲಟ್ಟಿ (40 ವರ್ಷ) ಮತ್ತು 2) ಮಾಯಪ್ಪಾ ಅಡಿವೆಪ್ಪಾ ಹಾಲಟ್ಟಿ (42 ವರ್ಷ) ಎಂಬ ಇಬ್ಬರನ್ನು ಅ. 28 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಕಳ್ಳತನ ಮಾಡಿದ್ದ 4 – 5 HP ಮೋಟಾರ್ ಗಳು, 4 – 2 HP ಮೋಟಾರ್ ಗಳು, 3 ಬೋರ್ವೆಲ್ ಸ್ಟಾರ್ಟರ್ ಗಳು ಮತ್ತು ಕೇಬಲ್ ವೈರ್ ಸೇರಿ 2.50 ಲಕ್ಷ ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂ ಮೌಲ್ಯದ ಒಂದು ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ.

ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಗೆ ನೀಡಲಾಗಿದ್ದು, ಹುಕ್ಕೇರಿ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!