ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತನಾಡುವುದು ಎಷ್ಟು ಸರಿ ಯತ್ನಾಳ್ ಹೇಳಿಕೆಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ “ಅರ್ಧ ಪಾಕಿಸ್ಥಾನವಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿದ ಮಾತಿಗೆ ತೀವ್ರ ಕಿಡಿಕಾರಿದ ಹೈಕೋರ್ಟ್, ಒಬ್ಬರ ಪತ್ನಿ ಮುಸ್ಲಿಂ ಅಂದ ಮಾತ್ರಕ್ಕೆ ಅದನ್ನು ಅರ್ಧ ಪಾಕಿಸ್ತಾನ ಎನ್ನಬಹುದೇ?

 

ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ತೀಕ್ಷ್ಮವಾಗಿ ಪ್ರಶ್ನಿಸಿತು. ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ರಾವ್

 

ದಾಖಲಿಸಿರುವ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

 

ವಿಚಾರಣೆ ಆರಂಭವಾಗುತ್ತಿದ್ದಂತೆ, ನ್ಯಾಯಪೀಠ ಯತ್ನಾಳ್ ಪರ ವಕೀಲರನ್ನು ಉದ್ದೇಶಿಸಿ ನಿಮಗೆ (ಯತ್ನಾಳ್‌) ಇದೆಲ್ಲ ಯಾಕೆ ಬೇಕು? ಇಂತಹದ್ದೆಲ್ಲ ನಿವೇಕೆ ಮಾತನಾಡಬೇಕು? ನಿಮ್ಮ ತಲೆಗೆ ಬಂದಿದ್ದೆಲ್ಲವನ್ನೂ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಅದೆಲ್ಲವನ್ನೂ ನೀವೇಕೆ ಹೇಳಿದ್ದೀರಿ? ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು. ಆ ಸಮುದಾಯ ಈ ದೇಶದಲ್ಲಿದೆ. ಪ್ರತೀ ಬಾರಿಯೂ ಪ್ರತೀ ಪ್ರಕರಣದಲ್ಲೂ ನಾನು ಹೇಳುತ್ತಿದ್ದೇನೆ. ಕೆಸರೆರಚುವುದು ನಿಲ್ಲಬೇಕು. ಇದರಿಂದ ಏನು ಸಿಗುತ್ತದೆ? ಎಂದು ತರಾಟೆಗೆ ತೆಗೆದುಕೊಂಡಿತು. ವಿಚಾರಣೆಯನ್ನು ಮುಂದೂಡಿತು.