ಶಾಸಕ ಪ್ರಭು ಚವ್ಹಾಣರಿಂದ ಔರಾದ-ಬೆಳಕುಣಿ ರಸ್ತೆ ಕಾಮಗಾರಿ ವೀಕ್ಷಣೆ

ಮಾಜಿ ಸಚಿವ ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೆ.18ರಂದು ಔರಾದ(ಬಿ) ತಾಲ್ಲೂಕಿನ ಬೆಳಕುಣಿ(ಚೌ) ಗ್ರಾಮದಲ್ಲಿ ನಡೆಯುತ್ತಿರುವ ಔರಾದ-ಬೆಳಕುಣಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟದ ಕುರಿತು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಶಾಸಕರು, ಚಾಲ್ತಿಯಲ್ಲಿರುವ ಕೆಲಸದ ಸ್ಥಳದಲ್ಲಿ ಸಂಚರಿಸಿ ಕೆಲಸದ ಗುಣಮಟ್ಟವನ್ನು ಪರಿಶೀಲಿಸಿದರು. ರಸ್ತೆಗೆ ದೊಡ್ಡ ಗಾತ್ರದ ಕಲ್ಲುಗಳನ್ನು ಬಳಸುತ್ತಿರುವುದು ಕಂಡು ಬೇಸರ ಹೊರಹಾಕಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಣೆ ಪಡೆದರು. ಜೆಇ ಜುಂಜೆರಾವ್ ನಾಯಕ್ ಅವರು ಕೆಲಸದ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಕಾಮಗಾರಿಗೆ ಕಳಪೆ ಸಾಮಗ್ರಿ ಬಳಸಿದರೆ ರಸ್ತೆ ಬಹಳಷ್ಟು ದಿನ ಬಾಳಿಕೆ ಬರುವುದಿಲ್ಲ. ಕೆಲವೇ ದಿನಗಳಲ್ಲೇ ಪುನ: ದುರಸ್ತಿಗೆ ಬರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಕಳಪೆ ಸಾಮಗ್ರಿಗಳನ್ನು ಬಳಸಬಾರದು. ಗುಣಮಟ್ಟದಲ್ಲಿ ಲೋಪಗಳು ಕಾಣಿಸಿದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಗುತ್ತಿಗೆದಾರರಿಗೆ ಎಚ್ಚರಿಸಿದರು. ಜನತೆಗೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ 4.19 ಕೋಟಿ ವೆಚ್ಚದಲ್ಲಿ ಮೊತ್ತದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂಗನಾಳ, ಚೌಧರಿ ಬೆಳಕುಣಿ ಸೇರಿದಂತೆ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವ ಈ ರಸ್ತೆ ಕಾಮಗಾರಿ ನಿಗದಿತ ಅವಧಿಯೊಳಗೆ ಮತ್ತು ಗುಣಮಟ್ಟದಿಂದ ಮಾಡಬೇಕು. ರಸ್ತೆಯ ಬಗ್ಗೆ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಕೆಲಸ ಮಾಡಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ