ದೆಹಲಿ: ದೆಹಲಿಯ ಶಕರ್ಪುರು ಪ್ರದೇಶದಲ್ಲಿ ಯುಪಿಎಸ್ಸಿ ಮಹಿಳಾ ಆಕಾಂಕ್ಷಿಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಹಸ್ಯವಾಗಿ ಸ್ಪೈ ಕ್ಯಾಮೆರಾಗಳನ್ನು ಆಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆ ದೆಹಲಿಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು. ಇನ್ನು ಆರೋಪಿಯನ್ನು ಆಕೆಯ ಭೂಮಾಲೀಕನ ಮಗ ಕರಣ್ ಎಂದು ಗುರುತಿಸಲಾಗಿದೆ. ಮಹಿಳೆಯು ಈ ಗುಪ್ತ ಸಾಧನಗಳನ್ನು ಕಂಡುಹಿಡಿದು ಪೊಲೀಸರಿಗೆ ನೀಡಿದ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ತನ್ನ ವಾಟ್ಸಾಪ್ ಖಾತೆಯಲ್ಲಿ ಅಸಾಮಾನ್ಯ ಚಟುವಟಿಕೆಯನ್ನು ಗಮನಿಸಿದ ನಂತರ ಅನುಮಾನಗೊಂಡಿದ್ದಾಳೆ. ಅವಳು ತನ್ನ ಲಿಂಕ್ ಮಾಡಿದ ಸಾಧನಗಳನ್ನು ಪರಿಶೀಲಿಸಿದಾಗ ತನ್ನ ಖಾತೆಯನ್ನು ಅಪರಿಚಿತ ಲ್ಯಾಪ್ ಟಾಪ್ನಿಂದ ಹ್ಯಾಕ್ ಮಾಡಲಾಗಿದೆ ಎಂದು ಅವಳು ಕಂಡುಕೊಂಡಿದ್ದಾಳೆ.
ಹೀಗಾಗಿ ಅವಳು ಅಪಾರ್ಟ್ಮೆಂಟನ್ನು ಪರಿಶೀಲಿಸಿದಾಗ ಅವಳ ಸ್ನಾನಗೃಹದ ಬಲ್ಬ್ ಹೋಲ್ಡರ್ ಒಳಗೆ ಸ್ಪೈ ಕ್ಯಾಮೆರಾವನ್ನು ಇಟ್ಟಿರುವುದು ಬಯಲಾಗಿದೆ.
ಈ ಕುರಿತು ಯುವತಿಯು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆಗ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಬಂದಿದ್ದಾರೆ. ಆಗ ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್ ನಲ್ಲಿ ಅಡಗಿರುವ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಪತ್ತೆಹಚ್ಚಿದ್ದಾರೆ.
ವರದಿ: ಸದಾನಂದ ಎಚ್