ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಇಎಸ್ ಐ ಆಸ್ಪತ್ರೆ ಸ್ಥಾಪಿಸುವಂತೆ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಮನ್ಸೂಖ ಮಾಂಡವಿಯಾ, ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿರುವ ಬೆಲ್ದಾಳೆ ಅವರು, ಗಡಿ ಭಾಗದ ಕಾರ್ಖಾನೆಗಳು ಸೇರಿದಂತೆ ವಿವಿಧೆಡೆ ಉದ್ಯೋಗದಲ್ಲಿ ತೊಡಗಿರುವ ದುಡಿಯುವ ವರ್ಗದವರ ಆರೋಗ್ಯ ರಕ್ಷಣೆಗಾಗಿ ಇಎಸ್ಐ ಆಸ್ಪತ್ರೆ ಸ್ಥಾಪನೆ ಅಗತ್ಯವಿದೆ ಎಂದು ಗಮನ ಸೆಳೆದಿದ್ದಾರೆ.
ಬೀದರ್ ಜಿಲ್ಲೆ ಕರ್ನಾಟಕದ ಅತೀ ಹಿಂದುಳಿದ ಪ್ರದೇಶದಲ್ಲಿ ಸೇರಿದೆ. ಜಿಲ್ಲೆಯು ಸುಮಾರು 20 ಲಕ್ಷ ಜನಸಂಖ್ಯೆ ಹೊಂದಿದ್ದು, ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಸಹ ಗಣನೀಯ ಜಾಸ್ತಿಯಿದೆ. ಬೀದರ್ ನಗರದ ಹೊರವಲಯದ ಕೊಳಾರ್ ನಲ್ಲಿ ಕೈಗಾರಿಕಾ ವಸಾಹತು ಪ್ರದೇಶವಿದ್ದು, 1600 ಎಕರೆ ಜಮೀನಿದೆ. ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಹ ಸುಮಾರು 800 ಎಕರೆ ಜಾಗವಿದೆ. ಈ ಪ್ರದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ನೂರಾರು ಕಾರ್ಖಾನೆಗಳಿವೆ. ಇಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪಿಸುವುದು ಅತೀ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದಾರೆ.
ಕಾರ್ಮಿಕರು ಮತ್ತವರ ಪರಿವಾರದವರಿಗೆ ಆರೋಗ್ಯ ಸಮಸ್ಯೆ ಎದುರಾದರೆ ಬೇರೆ, ಬೇರೆ ನಗರದ ಇಎಸ್ ಐ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗುತ್ತಿದೆ. ಬೇರೆಡೆ ಚಿಕಿತ್ಸೆಗೆ ಹೋಗಬೇಕಾದ ಕಾರಣ ತುರ್ತು ಪರಿಸ್ಥಿತಿಯಲ್ಲಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಬೇರೆಡೆ ಕರೆದುಕೊಂಡು ಹೋಗುವುದು ಸಮಯದ ವ್ಯಯದ ಜೊತೆಗೆ ಹೆಚ್ಚಿನ ಖರ್ಚು ಸಹ ಮೈಮೇಲೆ ಬರುತ್ತಿದೆ. ಇದರಿಂದ ಅಲ್ಪ ವೇತನದಲ್ಲಿ ದುಡಿಯುತ್ತಿರುವ ಕಾರ್ಮಿಕರು ಆರ್ಥಿಕ ತೊಂದರೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಕಾರ್ಮಿಕರ ಮತ್ತವರ ಕುಟುಂಬದ ಹಿತಕ್ಕಾಗಿ ಶೀಘ್ರ ಕ್ರಮ ಕೈಗೊಳ್ಳುವಂತೆ ಬೆಲ್ದಾಳೆ ಕೋರಿದ್ದಾರೆ.
ಬೀದರ್ ಜಿಲ್ಲೆಯು ಉತ್ತಮ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೊಂದಿದೆ. ಇಲ್ಲಿ ವಾಯುಪಡೆ ಕೇಂದ್ರದ ಜೊತೆಗೆ ನಾಗರಿಕ ವಿಮಾನ (ಏರ್ ಪೋಟ್೯) ಸೌಲಭ್ಯ ಇದೆ. ಉತ್ತಮ ಸಂಪರ್ಕ ಜಾಲದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಉದ್ಯಮಿಗಳು ಬಂಡವಾಳ ಹೂಡುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿ ಸಹಸ್ರಾರು ಕಾರ್ಮಿಕರಿಗೆ ಉದ್ಯೋಗ ಸಿಗಬಹುದಾಗಿದೆ. ಈ ಎಲ್ಲ ದೃಷ್ಟಿಯಿಂದ ಇಲ್ಲಿ ಸುಸಜ್ಜಿತ ಇಎಸ್ ಐ ಸ್ಥಾಪನೆ ಮಾಡಿ ಗಡಿ ಭಾಗದ ಕಾರ್ಮಿಕರ ಹಿತ, ಆರೋಗ್ಯ ಕಾಪಾಡುವಂತೆ ವಿನಂತಿಸಿದ್ದಾರೆ.
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಮನ್ಸೂಖ ಮಾಂಡವಿಯಾ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿ ಬೀದರ್ ನಲ್ಲಿ ಕಾರ್ಮಿಕರ ಹಿತದಿಂದ ಸುಸಜ್ಜಿತ ಇಎಸ್ ಐ ಆಸ್ಪತ್ರೆ ಸ್ಥಾಪಿಸುವಂತೆ ಮನವಿ ಪತ್ರ ಸಲ್ಲಿಸಿದರು.