ಚಿಮ್ಮೇಗಾಂವಗೆ ಶಾಸಕ ಪ್ರಭು ಚವ್ಹಾಣ ಭೇಟಿ: ವಸತಿ ಶಾಲೆ ಸ್ಥಳ ಪರಿಶೀಲನೆ

ಔರಾದ(ಬಿ) ತಾಲ್ಲೂಕಿನ ಚಿಮ್ಮೇಗಾಂವ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಬಾಲಕೀಯರ ವಸತಿ ಶಾಲೆ ನಿರ್ಮಾಣ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅ.16ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

 

ಕಟ್ಟಡ ನಿರ್ಮಿಸಲು ಯೋಜಿಸಿರುವ ಸ್ಥಳದಲ್ಲಿ ಸಂಚರಿಸಿ, ಅಧಿಕಾರಿಗಳಿಂದ ವಿವರಣೆ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಅವಶ್ಯಕ ಪ್ರಕ್ರಿಯೆಗಳನ್ನು ಬೇಗ ಆರಂಭಿಸಬೇಕೆAದು ತಿಳಿಸಲಾಗಿದೆ ಎಂದು ಹೇಳಿದರು.

 

ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ವಸತಿ ಶಾಲೆ ನಿರ್ಮಿಸಬೇಕೆಂಬುದು ಬಹುದಿನಗಳ ಬಯಕೆಯಾಗಿತ್ತು. ಸಾರ್ವಜನಿಕರ ಬೇಡಿಕೆಯೂ ಸಾಕಷ್ಟಿತ್ತು. ಇದಕ್ಕಾಗಿ ಸತತ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ದಾಬಕಾ ಗ್ರಾಮದಲ್ಲಿ ಜಮೀನು ಲಭ್ಯವಿಲ್ಲದ ಕಾರಣ ವಿಳಂಬವಾಗಿದೆ. ಚಿಮ್ಮೇಗಾಂವ್‌ನಲ್ಲಿ ಜಮೀನು ಒದಗಿಸಿದ ನಂತರ ವಸತಿ ಶಾಲೆಗೆ ಅನುದಾನ ಒದಗಿಸಬೇಕೆಂದು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದಿದ್ದೆ. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಚಿಮ್ಮೇಗಾಂವ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 10 ಎಕರೆ ಜಮೀನಿನಲ್ಲಿ 22 ಕೋಟಿ ವೆಚ್ಚದ ಭವ್ಯವಾದ ವಸತಿ ಶಾಲೆ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

 

ಈ ವಸತಿ ಶಾಲೆಯಿಂದ ದಾಬಕಾ ಹಾಗೂ ಏಕಂಬಾ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ಎಲ್ಲ ಭಾಗಗಳಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಬಲ್ಲೂರ(ಜೆ), ಚಿಂತಾಕಿ, ಹೊರಂಡಿ ಗ್ರಾಮಗಳಲ್ಲಿ ವಸತಿ ಶಾಲೆಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಚಿಮ್ಮೇಗಾಂವ ಗ್ರಾಮದಲ್ಲಿಯೂ ವಸತಿ ಶಾಲೆ ನಿರ್ಮಾಣ ಕೆಲಸ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಕಮಲನಗರ ತಹಸೀಲ್ದಾರರಾದ ಅಮೀತಕುಮಾರ ಕುಲಕರ್ಣಿ, ಮುಖಂಡರಾದ ಅನೀಲ ಬಿರಾದಾರ, ಧೊಂಡಿಬಾಯಿ ವಿಲಾಸ, ಸಂಜು ಪಾಟೀಲ ಚಿಮ್ಮೇಗಾಂವ, ಜ್ಞಾನದೇವ ಬಿರಾದಾರ, ಸಚಿನ ಬಿರಾದಾರ, ಕಿಶೋರ ಪಾಟೀಲ, ಯಶವಂತ ಪಾಟೀಲ, ರಮೇಶ ಪಾಟೀಲ, ನಾರಾಯಣ ಮುಳೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ