ಚಿತ್ತಾಪುರ : ಕಲಬುರಗಿ ಲೋಕಸಭಾ ನೂತನ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ನಿಮಿತ್ತ ಅ.೨೩ ರಂದು ಬುಧವಾರ ಬೆಳಗ್ಗೆ ೧೧ಕ್ಕೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ಇದೇ ಅ.೨೫ ರಂದು ಪಟ್ಟಣದಲ್ಲಿ ಆಯೋಜನೆ ಮಾಡಲಾಗುತ್ತಿದ್ದು, ಹೀಗಾಗಿ ಸಮಾರಂಭವನ್ನು ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ಮಾಡುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ಪುರಸಭೆ ಸದಸ್ಯರು ಮತ್ತು ಚಿತ್ತಾಪುರ ಮತಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳು ನೀಡಬೇಕೆಂದು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವರುದ್ರ ಬೇಣಿ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶಿವಕಾಂತ್ ಬೆಣ್ಣೂರಕರ್, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಕಾಂಗ್ರೆಸ್ ಯುವ ಅಧ್ಯಕ್ಷ ಸಂಜಯ ಬುಳಕರ್, ಪ್ರಮುಖರಾದ ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಭೀಮು ಹೋತಿನಮಡಿ, ರಾಮಲಿಂಗ ಬಾನರ್, ನಾಗು ಕಲ್ಲಕ್ ಸೇರಿದಂತೆ ಇತರರಿದ್ದರು.
ವರದಿ : ಸಂತೋಷ ಕುಮಾರ್ ಕಟ್ಟಿಮನಿ