ಔರಾದ್ : ಬಸವಣ್ಣನವರ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ವರ್ಗದವರನ್ನು ಸಮಾನತೆಯಿಂದ ಕಂಡು ಎಲ್ಲರನ್ನು ಮೇಲಕ್ಕೆ ಮಾಡಿದರು ಎಂದು ಬಸವಕಲ್ಯಾಣ ಅನುಭವ ಮ ಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಅನುಭವ ಮಂಟಪದಲ್ಲಿ ಭಾರತೀಯ ಬಸವ ಬಳಗ ಸಹಯೋಗದಲ್ಲಿ ಭಾನುವಾರ ರಾತ್ರಿ ನಡೆದ ೧೩ನೆಯ ತಿಂಗಳ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜವನ್ನು ಸಮಾನತೆಯ ಆಧಾರದಲ್ಲಿ ಕಟ್ಟಿದವರು ಬಸವಣ್ಣ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ನವೀನ ಕ್ರಾಂತಿ ಮೂಡಿಸಿದವರು. ಬಸವಣ್ಣರ ಸಂದೇಶ ಇಡಿ ವಿಶ್ವಕ್ಕೆ ಮಾದರಿಯಾಗಿರುವಂತಹದ್ದು ಎಂದರು. ಒಬ್ಬ ನೈಜ ಸಮಾಜ ಸುಧಾರಕರಾಗಿದ್ದ ಬಸವಣ್ಣರ ಚಿಂತನೆ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ಔರಾದ್ ಪಟ್ಟಣದಲ್ಲಿ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಇಲ್ಲಿಯ ಮಣ್ಣಿನಲ್ಲಿ ಅದ್ಭುತ ಶಕ್ತಿಯಿದೆ ಎಂದು ಔರಾದ್ ಕ್ಷೇತ್ರದ ಬಗ್ಗೆ ಕೊಂಡಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಲ್ಕಿ ಹಿರೇಮಠ ಸಂಸ್ಥಾನವು ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಈ ಭಾಗದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು. ಬಸವ ಸಮಿತಿ ಅಧ್ಯಕ್ಷ ಧನರಾಜ ರಾಗಾ ಅಧ್ಯಕ್ಷತೆ ವಹಿಸಿದರು. ನಿವೃತ್ತ ಪ್ರಾಚಾರ್ಯ ಜಗನ್ನಾಥ ಮೀಸೆ ಅನುಭಾವ ನುಡಿ ನುಡಿದರು. ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ಧನರಾಜ ಕೋಣೆ, ರತಿಕಾಂತ ಖರಜಿಗೆ, ಅಂಕುಶ ದೇಶಮುಖ, ಪವನಕುಮಾರ ಕೋಣೆ ಸೇರಿದಂತೆ ಘಾಟೆ ಪರಿವಾರದ ಸಂಬAಧಿಕರು ಪಾಲ್ಗೊಂಡರು.
ನಾಗಮ್ಮ ಸಂಗಪ್ಪ ಘಾಟೆ ದಂಪತಿಗಳು ಷಟಸ್ಥಳ ಧ್ವಜಾರೋಹಣ ನೇರವೇರಿಸಿದರು. ವಿಜಯಲಕ್ಷಿö್ಮ ಶಿವಕುಮಾರ ಘಾಟೆ ದಂಪತಿಗಳು ಬಸವಪೂಜೆ ಸಲ್ಲಿಸಿದರು. ಜಗನ್ನಾಥ ಮೂಲಗೆ ಸ್ವಾಗತಿಸಿದರು. ಶರಣಪ್ಪ ನಾಗಲಗಿದ್ದೆ ನಿರೂಪಿದರು. ಸಂತೋಷ ಘಾಟೆ ವಂದಿಸಿದರು. ಎಕಲಾರ ಶಾಲೆಯ ಮಕ್ಕಳಿಂದ ವಚನ ನೃತ್ಯ ನೆಡೆಯಿತು.
ದಾಸೋಹಿಗಳಿಗೆ ಸತ್ಕಾರ
ತಿಂಗಳ ಮನೆಗೊಂದು ಅನುಭವ ಮಂಟಪದಲ್ಲಿ ದಾಸೋಹ ವ್ಯವಸ್ಥೆ ಮಾಡಿರುವ ಧನರಾಜ ರಾಗಾ, ಸುಭಾಷ ಸಿರಂಜೆ, ಶರಣಪ್ಪ ಚಿಟಮೇ, ನಾಗನಾಥ ಚಿಟಮೇ, ಮಹಾದೇವ ಘೂಳೆ, ಅಂಬಾದಾಸ ನೇಳಗೆ, ಅಡವೇಪ್ಪ ಪಟ್ನೆ, ರಮೇಶ ದಾಡಗಿ, ಸಂಜು ಶೆಟಕಾರ, ರೇವಣಪ್ಪ ಎಡವೆ ಅವರನ್ನು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸತ್ಕರಿಸಿದರು.
೧೨ನೇ ಶತಮಾನದಲ್ಲಿಯೇ ಸ್ವತಂತ್ರ ಧರ್ಮಕ್ಕೆ ಮುದ್ರೆ
ಅನುಭವ ಮಂಟಪದಲ್ಲಿ ೧೨ನೇ ಶತಮಾನದಲ್ಲಿಯೇ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ. ಇನ್ನೂ ಸರಕಾರದಲ್ಲಿ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ಸ್ವಾಮಿಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸರಕಾರ ಕೆಲವೇ ದಿನಗಳಲ್ಲಿ ಬಸವಣ್ಣರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಅದೇ ರೀತಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಂದೇ ಬರುತ್ತದೆ. ನಿರಾಸೆಯಾಗದೇ ಸ್ವತಂತ್ರ ಧರ್ಮಕ್ಕೆ ಹೋರಾಡಬೇಕು ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಲಹೆ ನೀಡಿದರು. ಎಲ್ಲ ಕಡೆಗಳಲ್ಲಿಯೂ ಲಿಂಗಾಯತ ಜಾಗೃತಿ ಆಗಬೇಕು ಎಂದು ಕರೆ ನೀಡಿದರು. ಸ್ವತಂತ್ರ ಧರ್ಮ ಘೋಷಣೆ ಆದ್ರೆ ನಮಗೆ ಅನುಕೂಲ ಆಗಲಿದೆ. ಅದಕ್ಕಾಗಿ ಒಗ್ಗಟ್ಟಿನಿಂದ ಹೋರಾಡೋಣ ಎಂದರು.
ಸಾಧಕರಿಗೆ ಸತ್ಕಾರ
ಮನೆಗೊಂದು ಅನುಭವ ಮಂಟಪ ೧೩ನೆಯ ತಿಂಗಳ ಕಾರ್ಯಕ್ರಮ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹಮ್ಮಿಕೊಂಡಿದ್ದು, ಈ ವೇಳೆ ನಾನಾ ಕ್ಷೇತ್ರದಲ್ಲಿ ಸಾಧಕರಿಗೆ ಗುರುತಿಸಿ ಸತ್ಕರಿಸಲಾಯಿತು. ಗುಲಬರ್ಗಾ ವಿವಿ ಸಿಂಡಿಕೇಟ ಸದಸ್ಯ ಸಿದ್ದಪ್ಪ ಮೂಲಗೆ, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಯುವರತ್ನ ಪ್ರಶಸ್ತಿ ಪುರಸ್ಕೃತ ಸಂಗಮೇಶ ಜ್ಯಾಂತೆ, ಜಂಬಗಿ ಗ್ರಾಪಂ ಅಧ್ಯಕ್ಷೆ ಸುಮನಬಾಯಿ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ ಅವರನ್ನು ಸತ್ಕರಿಸಲಾಯಿತು.
ವರದಿ : ರಾಚಯ್ಯ ಸ್ವಾಮಿ