ಭಾರತೀಯ ಜನತಾ ಪಕ್ಷದಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ ಔರಾದ(ಬಿ) ಮಂಡಲವು ರಾಜ್ಯದಲ್ಲಿ ಐದನೇ ಸ್ಥಾನ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರನ್ನು ಸೋಮವಾರ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಔರಾದ(ಬಿ) ಮಂಡಲದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಕಾರ್ಯಕರ್ತರು ಪ್ರತಿ ಬೂತ್ಗಳಲ್ಲಿ ಓಡಾಡಿ ನಿರಂತರ ಶ್ರಮ ವಹಿಸಿದ್ದಾರೆ. ಅವರ ಪರಿಶ್ರಮದಿಂದಾಗಿ ಅಭಿಯಾನ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ಈ ಸನ್ಮಾನವನ್ನು ಮಂಡಲದ ಎಲ್ಲ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಅಭಿಯಾನ ಆರಂಭವಾದ ನಂತರ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಆಯೋಜಿಸಿ ಕಾರ್ಯಕರ್ತರು ಅಭಿಯಾನದಲ್ಲಿ ಹೇಗೆ ಕೆಲಸ ಮಾಡಬೇಕೆಂದು ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗಿತ್ತು. ಮಹಾಶಕ್ತಿ ಕೇಂದ್ರ, ಶಕ್ತಿ ಕೆಂದ್ರ ಹಾಗೂ ಎಲ್ಲ ಬೂತ್ಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹಾಗೂ ಮಂಡಲ ಅದ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಅವರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಅದರಂತೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ಗಳಲ್ಲಿ ಅಭಿಯಾನ ನಡೆಸಿರುವುದರಿಂದ ಗುರಿ ತಲುಪಲು ಸಾಧ್ಯವಾಗಿದೆ ಎಂದು ಸಂತೋಷ ಹಂಚಿಕೊAಡರು.
ಕಾರ್ಯಕರ್ತರು ಸತತ ಎರಡು ತಿಂಗಳವರೆಗೆ ಹಬ್ಬ-ಹರಿದಿನಗಳನ್ನು ಲೆಕ್ಕಿಸದೇ ಸಕ್ರೀಯವಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಔರಾದನಲ್ಲಿ ಚುನಾವಣೆಯ ಮಾದರಿಯಲ್ಲಿ ಕೆಲಸವಾಗಿದೆ. ಎಲ್ಲರ ಪರಿಶ್ರಮದಿಂದಾಗಿ ಔರಾದ(ಬಿ) ಮಂಡಲ ರಾಜ್ಯದಲ್ಲಿ 5ನೇ ಸ್ಥಾನ ಮತ್ತು ಉತ್ತರ ಕರ್ನಾಟಕದಲ್ಲಿ ಮೊದಲನೇ ಸ್ಥಾನ ಪಡೆದಿದೆ. ಔರಾದ(ಬಿ) ಕ್ಷೇತ್ರಕ್ಕೆ ಈ ಸ್ಥಾನಮಾನ ನೀಡಲು ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷರು ತಮಗೆ ಭಾಲ್ಕಿ ಹಾಗೂ ಬೀದರ ಪ್ರಭಾರಿಯಾಗಿ ನೇಮಕ ಮಾಡಿದ್ದರು. ಅವರ ನಿರ್ದೇಶನದಂತೆ ಅಲ್ಲಿನ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗಿದೆ. ನಂತರ ಎರಡೂ ಮಂಡಲಗಳಲ್ಲಿಯೂ ಸುಧಾರಣೆ ಕಾಣಿಸಿದೆ ಎಂದು ಹೇಳಿದರು.
ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಅತ್ಯವಶ್ಯಕವಾಗಿತ್ತು. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಇದೊಂದು ಪರಿಣಾಮಕಾರಿ ವಿಧಾನವೆಂದು ಭಾವಿಸಿ ಕೆಲಸ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಶ್ರಮಿಸೋಣ ಎಂದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ, ರಾಜ್ಯ ಸಹ ಉಸ್ತುವಾರಿ ಡಾ.ಸುಧಾಕರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ