ಔರಾದ(ಬಿ)ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಮಾಸ್ಟರ್ ಪ್ಲಾನ್)ಗೆ ಸರ್ಕಾರವು (ಅಂತಿಮ) ಅನುಮೋದನೆ ನೀಡಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಪಟ್ಟಣವನ್ನು ಯೋಜನಾಬದ್ಧವಾಗಿ ಸಮಗ್ರ ಅಭಿವೃದ್ಧಿಪಡಿಸುವ ಸಂಕಲ್ಪದೊAದಿಗೆ ಕೆಲಸ ಮಾಡುತ್ತಿದ್ದು, ಅದರಂತೆ ಪಟ್ಟಣದ ಮಾಸ್ಟರ್ ಪ್ಲಾನ್ ತಯಾರಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ನಂತರ ಸಚಿವರು ಮತ್ತು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಔರಾದ(ಬಿ) ಪಟ್ಟಣದ ಜನಸಂಖ್ಯೆಯು 2031 ರಲ್ಲಿ 30,000 ಗಳಿಗೆ ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(3) ರನ್ವಯ ಸರ್ಕಾರ ಅಂತಿಮ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದಿದ್ದಾರೆ.
ನಾನು ಶಾಸಕನಾದ ನಂತರ ಔರಾದ(ಬಿ) ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಿರಂತರ ಶ್ರಮಿಸುತ್ತಿದ್ದೇನೆ. ಪಟ್ಟಣದಲ್ಲಿ ರಸ್ತೆ, ಚರಂಡಿ, ಬೀದಿ ದೀಪಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇನೆ. ಬಹುದಿನಗಳ ಬೇಡಿಕೆಯಾದ ಮಾಸ್ಟರ್ ಪ್ಲಾನ್‌ಗೆ ಸರ್ಕಾರ ಅನುಮೋನೆ ನೀಡಿರುವುದರಿಂದ ಪಟ್ಟಣವನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಔರಾದ್‌ನಲ್ಲಿ ಸುಂದರವಾದ ಪಟ್ಟಣ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಉದ್ಯಾನವನ (ಟ್ರೀ ಪಾರ್ಕ್) ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ಸುಂದರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಶಾಲಾ-ಕಾಲೇಜುಗಳನ್ನು ತರಲಾಗಿದೆ. ಐಟಿಐ, ಡಿಪ್ಲೋಮಾ ಕಾಲೇಜು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ಪೈಪ್‌ಲೈನ್ ಮುಖಾಂತರ ನೀರು ಸರಬರಾಜು ಮಾಡುವ 84 ಕೋಟಿಯ ಯೋಜನೆಯನ್ನು ಮಂಜೂರು ಮಾಡಿಸಲಾಗಿದೆ. ಟೆಂಡರ್ ಆಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ.
ಔರಾದ(ಬಿ) ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಪಟ್ಟಣದಲ್ಲಿ ಉತ್ತಮ ರಿಂಗ್ ರೋಡ್ ನಿರ್ಮಿಸುವ ಬಗ್ಗೆ ಯೋಜಿಸಲಾಗಿದೆ. ಔರಾದ(ಬಿ) ಪಟ್ಟಣವನ್ನು ಸುಂದರ ತಾಣವಾಗಿಸುವ ಸಂಕಲ್ಪ ಹೊಂದಿದ್ದು, ಅದರಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ