ನರೇಗಾ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಕೂಸಿನ ಮನೆ (ಶಿಶು ಪಾಲನ ಕೇಂದ್ರ) ಆಸರೆಯಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದರು.
ಸೋಮವಾರ ಔರಾದ ತಾಲೂಕು ಪಂಚಾಯತ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದಲ್ಲಿ ಶಿಶು ಪಾಲನ ಕೇಂದ್ರ (ಮಕ್ಕಳ ಆರೈಕೆದಾರಿಗೆ) ಎರಡನೇ ಹಂತದ ತರಬೇತಿಯನ್ನು ಉದ್ಘಾಟನೆ ಮಾಡಿ ಮಾತನಾಡಿದವರು.
ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರಿಗೆ ನರೇಗಾ ಯೋಜನೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ, ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ಕೂಸಿನ ಮನೆಗೆ ಏಳು ತಿಂಗಳಿನಿಂದ ಮೂರು ವರ್ಷದ ಒಳಗಿನ ಮಕ್ಕಳು ಬರುತ್ತಾರೆ. ಅಂತಹ ಮಕ್ಕಳ ಆರೈಕೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನಿಮಗೆ ವರ್ಷಕ್ಕೆ ನೂರು ದಿನ ಕೆಲಸವನ್ನು ಕೊಡಲಾಗುವುದು. 349 ರೂ. ಕೂಲಿ ಮೊತ್ತವಿರುತ್ತದೆ ಮಕ್ಕಳ ಆರೈಕೆಯಲ್ಲಿ ನಿಮ್ಮ ಮಹತ್ವ ತುಂಬಾ ಮುಖ್ಯವಾದದ್ದು. ಎಲ್ಲ ಮಕ್ಕಳನ್ನು ನಿಮ್ಮ ಮಕ್ಕಳಂತೆ ಆರೈಕೆ ಮಾಡಬೇಕು. ಯಾವುದೇ ರೀತಿಯ ತೊಂದರೆಗಳಿದ್ದರೆ ನಿಮ್ಮ ಗ್ರಾ.ಪಂ. ಪಿಡಿಓ ಮತ್ತು ನಮ್ಮ ಗಮನಕ್ಕೆ ತರಬೇಕು. ಸಂಬಳದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದರು.
ಶಿಶು ಮತ್ತು ಅಭಿವೃದ್ಧಿ ಅಧಿಕಾರಿ ಇಮಾಲಪ್ಪಾ ಮಾತನಾಡಿ ಕೂಸಿನ ಬರುವ ಮಕ್ಕಳು ತುಂಬಾ ಚಿಕ್ಕ ಮಕ್ಕಳಿರುವುದರಿಂದ ಅವರ ರಕ್ಷಣೆ ಮಾಡುವುದು ನಿಮ್ಮ ಮೊದಲ ಕರ್ತವ್ಯ ಆಗಬೇಕು. ಕೂಸಿನ ಮನೆಗೆ ನಮ್ಮ ಅಂಗನವಾಡಿ ಮೇಲ್ವಿಚಾರಕಿಯರು ಭೇಟಿ ನೀಡಿ ಪರಿಶೀಲಿಸುತ್ತಾರೆ ಅದಕ್ಕಾಗಿ ಸರಿಯಾದ ರೀತಿಯಲ್ಲಿ ನಿಮ್ಮ ಕಾರ್ಯವನ್ನು ನಿರ್ವಹಿಸಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ನ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ ಮತ್ತು ಹಣಮಂತರಾಯ ಕೌಟಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶೋಭಾ, ರಾಜೇಶ್ವರಿ, ಐಇಸಿ ಸಂಯೋಜಕರಾದ ಸವಿತಾ ನಾಗೇಶ, ತಾ.ಪಂ. ತರಬೇತಿ ಸಂಯೋಜಕಿ ಶ್ರೀದೇವಿ ಸೇರಿದಂತೆ ಮಕ್ಕಳ ಆರೈಕೆದಾರರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ