ಔರಾದ್: ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಮೌಲ್ಯಯುತ ಮತದಾನದ ಹಕ್ಕನ್ನು ನೀಡುವ ಮೂಲಕ ಎಲ್ಲರೂ ಸಮಾನರು ಎಂದು ತಿಳಿಸಿದ ಅವರು ಸರ್ವ ಜನಾಂಗಕ್ಕೂ ಸ್ಫೂರ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ್ ಹೇಳಿದರು.
ಪಟ್ಟಣದ ಪತ್ರಿಸ್ವಾಮಿ ಶಾಲೆಯಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಹಾಗೂ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 2024-2025ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸಿಕೊಟ್ಟವರು ಅವರು. ಅವರ ವಿಚಾರಧಾರೆಗಳು ಸಂವಿಧಾನದಲ್ಲಿ ಉಲ್ಲೇಖ ಆಗದೆ ಹೋಗಿದ್ದರೆ ನಮ್ಮ ರಾಷ್ಟ್ರ ಊಹೆಮಾಡಿಕೊಳ್ಳಲು ಅಸಾಧ್ಯವಾಗುತ್ತಿತ್ತು. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅವರನ್ನು ನೆನೆಯಬೇಕು ಎಂದರು.
ಧರ್ಮ ಇರುವುದು ಮನುಷ್ಯರಿಗಾಗಿ ಧರ್ಮಕ್ಕಾಗಿ ಮನುಷ್ಯರು ಅಲ್ಲ, ನಾನು ಸಂವಿಧಾನ ರಥವನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೇನೆ. ನಿವೇಲ್ಲರೂ ಅದನ್ನು ಮುಂದಕ್ಕೆ ಎಳೆಯಿರಿ. ಯಾವುದೇ ಕಾಲಕ್ಕೂ ಅದನ್ನು ಹಿಂದಕ್ಕೆ ಹೋಗಲು ಬಿಡಬೇಡಿ ಎಂಬ ಸಮಾಜ ಕಳಕಳಿ ಅವರದಾಗಿತ್ತು ಎಂದರು.
ಸಂಪನ್ಮೂಲ ವ್ಯಕ್ತಿ ಶಾಮಸುಂದರ ಖಾನಾಪುರೆ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಅಂಬೇಡ್ಕರ್ ಅವರ ಸಿದ್ಧಾಂತ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಂತೆ ನಡೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ದೇಶದ ಬೃಹತ್ ಸಂವಿಧಾನವನ್ನು ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಸಮಾನತೆ, ಶಿಕ್ಷಣ, ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಮಾನವತಾವಾದಿ ಎಂದು
ಬಣ್ಣಿಸಿದರು.
ವಿದ್ಯಾರ್ಥಿನಿ ಸಂದ್ಯಾರಾಣಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರರಾದ ಸುನಿಲ ಕಡ್ಡೆ, ರವಿದಾಸ, ದಿಗಂಬರ, ಸಂಗಮೇಶ ಬೆಲ್ದಾಳ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನದ ಕುರಿತು ಹಾಡುಗಳು ಹಾಡುವ ಮೂಲಕ ಗಮನ ಸೆಳೆದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಧ್ವನಿ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಜಾನ್ಸನ್ ಘೋಡೆ, ಮಾಜಿ ತಾಲೂಕು ಕಸಾಪ ಅಧ್ಯಕ್ಷ ಜಗನ್ನಾಥ ಮೂಲಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕ್ಲೆಮೇಂಟಿನಾ, ರತ್ನದೀಪ ಕಸ್ತೂರೆ, ರೋಹಿತ ಕಾಂಬಳೆ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.
ಸತ್ಕಾರ : ಡಾ. ಬಿಆರ್ ಅಂಬೇಡ್ಕರ್ ಅವರ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಕಾವೇರಿ ಮಾಧವರಾವ (ಪ್ರಥಮ), ಬಾಲಿಕಾ ಗೋವಿಂದರಾವ (ದ್ವಿತೀಯ), ಸಂಧ್ಯಾರಾಣಿ ಸಂಜುಕುಮಾರ (ತೃತೀಯ) ಹಾಗೂ ತನುಶ್ರೀ ದಿಗಂಬರ, ಸುರೇಖಾ ವಾಮನ (ಸಮಾಧಾನಕರ ಬಹುಮಾನ) ಪಡೆದರು. ಇವರನ್ನು ಇಲಾಖೆಯಿಂದ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.
ವರದಿ : ರಾಚಯ್ಯ ಸ್ವಾಮಿ